Arecanut-ಸಾವಿನ ಅಂಚಿಗೆ ಜಾರಿದ ಸಾವಿರಾರು ಅಡಕೆ ಮರಗಳು; ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿ
Arecanut-ಸಾವಿನ ಅಂಚಿಗೆ ಜಾರಿದ ಸಾವಿರಾರು ಅಡಕೆ ಮರಗಳು; ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿ
ತೀರ್ಥಹಳ್ಳಿಯ ಪ್ರಸಿದ್ಧ ದೇಶಾವರಿ ಅಡಕೆಗೆ ಎಲೆಚುಕ್ಕಿ ರೋಗ ಆವರಿಸಿದ್ದು, ಇಳುವರಿ ಕುಸಿತದಿಂದ ರೈತರ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ರೋಗಕ್ಕೆ ಪರಿಹಾರ ಸಿಗದೆ, ಮರಗಳು ನಾಶವಾಗುತ್ತಿವೆ. ಸರ್ಕಾರದಿಂದ ಸೂಕ್ತ ಸ್ಪಂದನೆ ಹಾಗೂ ಸಂಶೋಧನೆಗೆ ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ.
ಅತ್ಯುತ್ತಮ ಗುಣಮಟ್ಟದ ದೇಶಾವರಿ ಅಡಕೆ ಉತ್ಪಾದನೆಗೆ ತೀರ್ಥಹಳ್ಳಿ ಪ್ರಸಿದ್ಧಿಯಾಗಿದೆ. ಮಾರುಕಟ್ಟೆಯಲ್ಲಿ ಇಂದಿಗೂ ದೇಶಾವರಿ ಅಡಕೆಗೆ ನಿರೀಕ್ಷೆಗೂ ಮೀರಿದ ಬೆಲೆ ದೊರೆಯುತ್ತಿದೆ. ಉತ್ತಮ ಧಾರಣೆ ಕಾರಣ ಮಲೆನಾಡಿನ ಆರ್ಥಿಕ ಚಟುವಟಿಕೆಯಲ್ಲಿ ಅಡಕೆ ಪ್ರಧಾನ ಪಾತ್ರ ವಹಿಸಿದೆ. ಆದರೆ, ಈ ವರ್ಷ ಅಡಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗ ಮಲೆನಾಡು ಭಾಗದ ಆರ್ಥಿಕ ಚಟುವಟಿಕೆಗೆ ಭಾರೀ ಹೊಡೆತ ನೀಡುವುದು ಬಹುತೇಕ ಖಚಿತ ವಾಗಿದೆ...
ತಾಲೂಕಿನ ಬಹುತೇಕ ಭಾಗಕ್ಕೆ ಎಲೆಚುಕ್ಕಿ ರೋಗ ವ್ಯಾಪಿಸಿದ್ದು, ಆರ್ಥಿಕ ಚಟುವಟಿಕೆ ನಿಧಾನಕ್ಕೆ ಸೊರಗುತ್ತಿದೆ. ಎಲೆಚುಕ್ಕಿ ರೋಗ, ಇನ್ನೊಂದೆಡೆ ಅಡಕೆ ಇಳುವರಿ ಕುಸಿತ ಆರ್ಥಿಕ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರಿದೆ. ಸಾವಿರಾರು ಅಡಕೆ ಮರಗಳು ಸಾವಿನ ಅಂಚಿನಲ್ಲಿದ್ದು, ಮುಂದಿನ ವರ್ಷ ರೋಗ ಉಲ್ಬಣಿಸಿದರೆ ಎಕರೆಗಟ್ಟಲೆ ವಿಸ್ತೀರ್ಣದಲ್ಲಿ ಅಡಕೆ ಮರಗಳು ಜೀವ ಕಳೆದುಕೊಳ್ಳಲಿವೆ.
ಆರ್ಥಿಕ ಚಟುವಟಿಕೆಗೆ ಹೊಡೆತ
ಬಹುತೇಕ ಜನರ ಬದುಕು ಅಡಕೆ ಭವಿಷ್ಯವನ್ನೇ ಆಧರಿಸಿದೆ. ರೋಗ ಉಲ್ಬಣ, ಇಳುವರಿ ಕುಸಿತ, ಆರ್ಥಿಕ ಹೊಡೆತ ಎಲ್ಲದರ ಅನುಭವ ಜನರಿಗೆ ಗೊತ್ತಾಗುತ್ತಿದೆ. ರೋಗದ ಕಾರಣ ಅಡಕೆ ಭವಿಷ್ಯ ಆತಂಕದಲ್ಲಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತ ವಾಗುವ ಮುನ್ಸೂಚನೆ ದಟ್ಟವಾಗಿದೆ.
ಔಷಧ ಪತ್ತೆಗೆ ಸಿಗದ ಪ್ರೋತ್ಸಾಹ
ನೂರಾರು ವರ್ಷಗಳಿಂದ ದೇಶಾವರಿ ತಳಿಯ ಅಡಕೆ ಯಾವ ರೋಗಕ್ಕೂ ಜಗ್ಗಿಲ್ಲ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಕೊಳೆರೋಗಕ್ಕೆ ರೈತರು 45 ದಿನಕ್ಕೊಮ್ಮೆ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆ ಮಾಡಿ ರೈತರು ಸುಮ್ಮನಾಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿಕೊಳೆರೋಗ ನಿಯಂತ್ರಣಕ್ಕೆ ರೈತರು 30 ದಿನದೊಳಗೆ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಹೀಗಿದ್ದರೂ ಕೊಳೆರೋಗ ಕೂಡ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ.
ಆರೇಳು ವರ್ಷದಿಂದ ವಿಪರೀತ ಎಂಬಂತೆ ಕಂಡುಬಂದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳು, ತೋಟಗಾರಿಕಾ ತಜ್ಞರು ಸಲಹೆಯಂತೆ ಉಪಯೋಗಿಸಿದ ಔಷಧಗಳು ನಿಷ್ಟ್ರಯೋಜಕ ವಾಗಿವೆ. ಆಗಸ್ಟ್ ತಿಂಗಳ ಅಂತ್ಯದಲ್ಲಿಎಲೆಚುಕ್ಕಿ ರೋಗ ವ್ಯಾಪಕವಾಗಿ ಮರ, ಬೆಳೆ ಮೇಲೆ ಭಾರೀ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತಿದೆ. ರೈತರು, ಅಡಕೆ ವಹಿವಾಟು ಅವಲಂಬಿಸಿದ ಜನರು ತೊಂದರೆಗೆ ಸಿಕ್ಕಿಕೊಳ್ಳುತ್ತಿದ್ದಾರೆ ಎಂಬ ಪೂರ್ಣ ಮಾಹಿತಿ ಇದ್ದರೂ ಇವತ್ತಿನವರೆಗೆ ಕೇಂದ್ರ, ರಾಜ್ಯ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಪರಿಶೀಲನೆ ಕ್ರಮಕ್ಕೆ ಮುಂದಾಗಿಲ್ಲ ನಿರಂತರ ಸಂಶೋಧನೆಗೂ ತಜ್ಞರನ್ನು ನೇಮಿಸಿಲ್ಲ. ರೋಗ ನಿಯಂತ್ರಣ ಔಷಧ ಪತ್ತೆಗೆ ಖಾಸಗಿ ವಲಯದ ಸಂಶೋಧಕರಿಗೂ ಸರಕಾರಗಳು ಪ್ರೋತ್ಸಾಹ ನೀಡಿಲ್ಲ.

