Arecanut problem-ಅಡಿಕೆ ಬೆಳೆಗಾರರಿಗೆ ಇ-ವೇ ಬಿಲ್ ಪ್ರಹಾರ! ಏನೀದು ಇ-ವೇ ಬಿಲ್?
<Krushirushi> <ಅಡಿಕೆ ಬಿಡಿ ನಿಂಬೆ ನೆಡಿ> <Lemon plantation> <ಅಡಿಕೆ ಬೆಳೆ> <ಅಡಿಕೆ> <ಅಡಿಕೆ ಕ್ಷೇತ್ರ> <ಅಡಿಕೆ ರೇಟ್> <ಅಡಿಕೆ ಬೆಲೆ><Arecanut variety> <Arecanut cultivation> <Arecanut> <Arecanut price> <Arecanut> <Arecanut area> <Areca> <Arecanut problem> <Arecanut e-way bill>

Arecanut problem-ಅಡಿಕೆ ಬೆಳೆಗಾರರಿಗೆ ಇ-ವೇ ಬಿಲ್ ಪ್ರಹಾರ! ಏನೀದು ಇ-ವೇ ಬಿಲ್?
ಅಡಿಕೆ ವಹಿವಾಟಿನ ಮೇಲೆ ನಿಗಾ ಕೇಂದ್ರೀಕರಿಸಿರುವ ವಾಣಿಜ್ಯ ಇಲಾಖೆಯು ಅಡಿಕೆ ಬೆಳೆಗಾರರ ಮೇಲೆ ಮತ್ತೊಂದು ಅವೈಜ್ಞಾನಿಕ ತೂಗು ಕತ್ತಿ ಇಳಿ ಬಿಟ್ಟಿದೆ. ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ವಾಹನಗಳಲ್ಲಿ ಸಾಗಿಸಿ ಮಾರುಕಟ್ಟೆಗೆ ತರಬೇಕಾದರೆ, ಸಾಗಣೆ ಮಾಡುವ ಮೊದಲು ಆನ್‌ಲೈನಲ್ಲಿ ಇ-ವೇ ಬಿಲ್ (E-Way Bill) ನಮೂದಿಸುವುದು ಕಡ್ಡಾಯ ಮಾಡಲಾಗಿದೆ.
ಈ ಬಗ್ಗೆ ಸಾಮಾನ್ಯ ರೈತರಿಗೆ ಯಾವುದೇ ಮಾಹಿತಿ, ಅರಿವು ನೀಡದೆ ಕಾನೂನು ಜಾರಿ ಮಾಡಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ಮತ್ತು ಆಕ್ರೋಶ ಸೃಷ್ಟಿಸಿದೆ. ಕಡ್ಡಾಯ ನಿಯಮ ಮಾಡುವ ಮೊದಲು ಇ-ವೇ ಬಿಲ್ ಬಗ್ಗೆ ಒಂದು ಸ್ಪಷ್ಟ ಮಾಹಿತಿಗಳನ್ನು ಸಾಮಾನ್ಯ ರೈತರಿಗೆ ಕೊಡಬೇಕಲ್ವಾ? ಬಿಲ್ ಜನರೇಟ್ ಮಾಡುವುದು ಹೇಗೆ? ಎಲ್ಲಿ ಮಾಡುವುದು? ಲಿಂಕ್ ಯಾವುದು? ಏನೇನ್ ದಾಖಲೆಗಳನ್ನು ಫೀಡ್ ಮಾಡಬೇಕು?...... ಇತ್ಯಾದಿಗಳ ಒಂದು ಬೇಸಿಕ್ ಟ್ರೈನಿಂಗ್ ಮಾಹಿತಿಯ ಪ್ರಕಟಣೆಯನ್ನಾದರೂ ರೈತರಿಗೆ ಕೊಡಬೇಕಲ್ವಾ? ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ಇ-ವೇ ಬಿಲ್‌ನ ತಲೆ ಬುಡ ಗೊತ್ತಿಲ್ಲದ ರೈತರು ಏನು ಮಾಡಬೇಕು?
ಎಲ್ಲಾ ರೈತರ ಬಳಿ ಆಯಂಡ್ರಾಯ್ಡ್ ಫೋನ್ ಇದೆಯಾ? ಎಲ್ಲಾ ಕಡೆ ಇಂಟರ್‌ನೆಟ್ ಸೌಲಭ್ಯ ಇದೆಯಾ? ಮಂಗ, ಆನೆ, ಕಾಡುಕೋಣಗಳ ಹಾವಳಿಯ ನೆಟ್ವರ್ಕ್ ಬಿಟ್ರೆ ಎಂತಹ ನೆಟ್‌ವರ್ಕೂ ಮಲೆನಾಡಿನ ರಿಮೋಟ್ ಹಳ್ಳಿಗಳಲ್ಲಿ ಇಲ್ಲ. ರೈತರು ಏನು ಮಾಡಬೇಕು ಎನ್ನುವುದು ರೈತರು ಟವೆಲ್‌ನಲ್ಲಿ ಬೆವರು ಒರೆಸುತ್ತ ಕೇಳುವ ಪ್ರಶ್ನೆ.
ರಾತ್ರಿ ಹೊತ್ತು ವಾಣಿಜ್ಯ ಇಲಾಖೆಯವರು, ಗ್ರಾಮ ಪಂಚಾಯಿತಿಯವರು ಮಲಗಿದ ಮೇಲೆ, ಕಳ್ಳ ಮಾರ್ಗದಲ್ಲಿ ಮರಳು ಸಾಗಿಸುವ ಹಾಗೆ ರೈತರು ಕದ್ದು ಮುಚ್ಚಿ ಅಡಿಕೆ ಸಾಗಾಣಿಕೆ ಮಾಡಬೇಕಾ? ಪ್ರಾಮಾಣಿಕ ರೈತರೂ ಇನ್ನು ಮುಂದೆ ಕದ್ದು ಮುಚ್ಚಿ ವ್ಯವಹರಿಸಬೇಕಾ? ವಾಣಿಜ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳಿಗೆ ಮಾಮೂಲು ವಸೂಲಿಗೆ ರೈತರು ತಾವು ಬೆಳೆದ ಮೂರು ಕಾಸಿನ ಬೆಲೆಯೂ ಇಲ್ಲದಂತಾಗಿರುವ ಗೊರಬಲು ಅಡಿಕೆ, ಸಿಪ್ಪೆ ಗೋಟಿನ ಸಾಗಾಣಿಕೆಯಲ್ಲಿ ಪರ್ಸಂಟೇಜ್ ಎತ್ತಿಡಬೇಕಾ ಎಂದು ಆಕ್ರೋಶದಲ್ಲಿ ರಸ್ತೆ ತಿರುವಿನಲ್ಲಿ ರೈತರು ವಾಣಿಜ್ಯ ಅಧಿಕಾರಿಗಳೊಂದಿಗೆ ಪ್ರತಿಭಟನೆಯ ವಾಗ್ವಾದಕ್ಕಿಳಿದಿದ್ದಾರೆ.
ಸರಕಾರದ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಹೊಟ್ಟೆಗೆ ಏನ್ ತಿಂತಿದಾರೆ, ಏನ್ ಕುಡಿತಿದಾರೆ?, ವಾಸ್ತವದ ಪ್ರಜ್ಞೆ ಇಲ್ವಾ? ಕಾಮನ್ ಸೆನ್ಸ್ ಇಲ್ಲದವರಾಗಿದ್ದಾರಾ? ಮೂರ್ಖರಾಗಿದ್ದಾರಾ ಎಂಬುದು ರೈತರ ಪ್ರಶ್ನೆ. ವಿದೇಶದಿಂದ ಕಳ್ಳ ದಾರಿಯಲ್ಲಿ ಕೋಟಿ ಕೋಟಿ ಮೌಲ್ಯದ ಅಡಿಕೆ ನಿತ್ಯ ಬರ್ತಾ ಇದೆ. ಅದಕ್ಕೆ ಯಾವ ಇ-ವೇ ಬಿಲ್ ನಿಯಂತ್ರಣ ಇಲ್ಲ. ಇಲ್ಲಿ ಬಡ ರೈತನ ಮೂರು ಮುಕ್ಕಾಲು ಕಾಸಿನ ಅಡಿಕೆಗೆ ಇ-ವೇ ಬಿಲ್ ಪ್ರಹಾರ ಯಾವ ನ್ಯಾಯ?
ಇ-ವೇ ಬಿಲ್ ವ್ಯವಸ್ಥೆ ತರುವುದು ಬೇಡ ಅಂತಲ್ಲ. ಮೊದಲು ಅದಕ್ಕೆ ಬೇಕಾಗುವ ಅಗತ್ಯ ಮಾಹಿತಿ ಹಂಚಿಕೆ, ಬೇಸಿಕ್ ತರಬೇತಿ, ಇಂಟರ್‌ನೆಟ್ ಸೌಲಭ್ಯ, ಕರೆಕ್ಟಾಗಿ ಚಾಲನೆಯಲ್ಲಿರುವ ಸರ್ವರ್ ಇವುಗಳನ್ನೆಲ್ಲ ಕೊಡಬೇಕಲ್ವಾ ಎಂಬುದು ರೈತರು ಸರಕಾರಕ್ಕೆ ಕೇಳುತ್ತಿರುವ ಪ್ರಶ್ನೆ.
ಒಟ್ಟಿನಲ್ಲಿ, ಸರಕಾರಗಳು ಮತ್ತೊಂದು ಆತಂಕದ ತೂಗುಕತ್ತಿಯನ್ನು ಅಡಿಕೆ ಬೆಳೆಗಾರರ ಮೇಲಿಟ್ಟು ಗೊಂದಲ, ವಿವಾದಗಳನ್ನು ನಿರ್ಮಿಸಿದೆ. ರಸ್ತೆ ಬದಿ ಅಡಿಕೆ ತುಂಬಿದ ಗಾಡಿ ನಿಲ್ಲಿಸಿ, ಇ-ವೇ ಬಿಲ್ ಇಲ್ಲದ ರೈತರಿಂದ ಮಾಮೂಲಿ ವಸೂಲಿಯೂ ನಡೆಯುತ್ತಿದೆ.
ಬೇರೆ 'ದಾರಿ ಇಲ್ಲದೆ', ಮಾಮೂಲಿ ಕೊಟ್ಟ ಅಡಿಕೆ ಬೆಳೆಗಾರ, ಸರಕಾರಕ್ಕೆ, ವಸೂಲಿಗಿಳಿದ ದರಿದ್ರ ಅಧಿಕಾರಿಗಳಿಗೆ, ಎಸಿ ರೂಮಿನಲ್ಲಿ ನಿದ್ರೆಯಲ್ಲಿರುವ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿ, ಉರಿ ಬಿಸಿಲಿನಲ್ಲಿ ಗೊರಬಲು ಅಡಿಕೆ ಮೂಟೆಯೊಂದಿಗೆ ಮಾರುಕಟ್ಟೆಗೆ ಹೋಗಬೇಕಾಗಿದೆ.