ಬೆಳೆ ವಿಮೆ ಜಮೆ ಆರಂಭ; ಕಡಿಮೆ ಮೊತ್ತ ಜಮೆ ಆಗುತ್ತಿದೆ ಎಂದು ರೈತರ ಆರೋಪ

ಬೆಳೆ ವಿಮೆ ಜಮೆ ಆರಂಭ; ಕಡಿಮೆ ಮೊತ್ತ ಜಮೆ ಆಗುತ್ತಿದೆ ಎಂದು ರೈತರ ಆರೋಪ

ಬೆಳೆ ವಿಮೆ ಜಮೆ ಆರಂಭ; ಕಡಿಮೆ ಮೊತ್ತ ಜಮೆ ಆಗುತ್ತಿದೆ ಎಂದು ರೈತರ ಆರೋಪ

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದ ರೈತರ ಖಾತೆಗೆ ಸೋಮವಾರದಿಂದ ಮೊತ್ತ ಜಮೆ ಆಗಲು ಆರಂಭಗೊಂಡಿದೆ. ಈ ನಡುವೆ ನಿರೀಕ್ಷೆಗಿಂತ ಕಡಿಮೆ ಮೊತ್ತ ಜಮೆ ಆಗುತ್ತಿರುವ ಬಗ್ಗೆ ರೈತರು ದೂರಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೆಳೆ ವಿಮೆ ಪಾವತಿಯಾದ ಲೆಕ್ಕಚಾರದ ಬಗ್ಗೆಯೇ ವ್ಯಾಪಕ ಚರ್ಚೆ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಅನ್ವಯವಾಗುವಂತೆ ಬೆಳೆ ವಿಮೆ ಪಾವತಿಸಬಹುದು. ಅಡಿಕೆ ಹೆಕ್ಟರ್‌ಗೆ 6400 ರೂ. ಹಾಗೂ ಕಾಳುಮೆಣಸು ಹೆಕ್ಟರ್‌ಗೆ 2350 ರೂ.ವಿಮಾ ಪ್ರಿಮಿಯಂ ಮೊತ್ತವನ್ನು ಸಹಕಾರಿ ಸಂಘ/ರಾಷ್ಟ್ರೀಯ ಬ್ಯಾಂಕ್‌ ಮೂಲಕ ಸರಕಾರಕ್ಕೆ ಪಾವತಿಸಬೇಕಿತ್ತು. ಬೆಳೆ ವಿಮೆ ಪಾವತಿಸಿದವರಿಗೆ ಹವಾಮಾನ ಆಧಾರಿತವಾಗಿ ವಿಮೆ ಮೊತ್ತ ಪ್ರತಿ ವರ್ಷ ಜಮೆಯಾಗುತ್ತದೆ.

ಕಡಿಮೆ ಜಮೆ: ಈ ವರ್ಷ ಎಂದಿಗಿಂತ ತಡವಾಗಿ ಬೆಳೆ ವಿಮೆ ಮೊತ್ತ ಜಮೆ ಆಗಿದ್ದು, ಅದರಲ್ಲೂ ಬೆಳೆ ವಿಮೆ ಮೊತ್ತ ನಿರೀಕ್ಷೆಗಿಂತ ಕಡಿಮೆ ಜಮೆ ಆಗುತ್ತಿದೆ ಎಂದು ತಾಲೂಕಿನ ಕೆಲವು ರೈತರು ದೂರಿಕೊಂಡಿದ್ದು, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳಲ್ಲೂ ಈ ಬಗ್ಗೆ ಪ್ರಶ್ನಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಹೆಚ್ಚಿನವರಿಗೆ ಕಾಳುಮೆಣಸು ಬೆಳೆಯ ಬೆಳೆ ವಿಮೆ ಮೊತ್ತ ಮಾತ್ರ ಜಮೆ ಆಗಿದ್ದು, ಅದೂ ಕೂಡ ವಿಮೆ ಮೊತ್ತ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

ಅಡಿಕೆ ಮತ್ತು ಕಾಳುಮೆಣಸಿಗೆ ವಿಮೆ ಪಾವತಿಸಿದ್ದರೂ ಇದೀಗ ಎರಡೂ ಬೆಳೆಯ ಮೊತ್ತ ಜಮೆ ಆಗದೇ ಇರುವುದರಿಂದ ಮೊತ್ತ ಹೆಚ್ಚು-ಕಡಿಮೆ ಆಗಿರುವ ಬಗ್ಗೆ ಅಂದಾಜಿಸಲು ಆಗುತ್ತಿಲ್ಲ. ಶೇ.30ರಷ್ಟು ಕಡಿಮೆ ಜಮೆ ಆಗಿರುವ ಬಗ್ಗೆ ರೈತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಈ ಬೆಳೆ ವಿಮೆ ಪಾವತಿ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಕೆಲ ದಿನಗಳವರೆಗೆ ಮೊತ್ತ ಜಮೆ ಮುಂದುವರಿಯಲಿದೆ. ಸುಳ್ಯ ತಾಲೂಕಿನಲ್ಲಿ ಅಂದಾಜು 21 ಸಾವಿರ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಸುಳ್ಯ ತಾಲೂಕಿನಿಂದಲೇ ಜಿಲ್ಲೆಯ ಅಧಿಕಾರಿಗಳಿಗೆ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ಸೋಮವಾರ ದಿನವಿಡೀ ಆಯಾ ರೈತರು ತಮಗೆ ಜಮೆಯಾದ ಮೊತ್ತದಲ್ಲಿ ನಿರೀಕ್ಷಿತ ಮೊತ್ತ ಬಂದಿಲ್ಲ, ಕಡಿಮೆ ಬಂದಿದೆ, ಕೇವಲ ಒಂದು ಬೆಳೆಯ ಹಣ ಮಾತ್ರ ಜಮೆಯಾಗಿದೆ, ನಮ್ಮ ಭಾಗದಲ್ಲಿ ಹೆಚ್ಚಿನವರಿಗೆ ಇದೇ ರೀತಿ ಕಡಿಮೆ ಹಣ ಜಮೆಯಾಗಿದೆ ಎಂಬ ರೀತಿಯಲ್ಲಿ ಹೇಳಿದ್ದಾರೆ.

ಪೂರ್ಣ ವರದಿ ಬರಬೇಕಿದೆ: ಬೆಳೆ ವಿಮೆ ಮೊತ್ತ ಕಡಿಮೆ ಜಮೆ ಆಗಿರುವ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಲ್ಲಿ ಕೇಳಿದ ವೇಳೆ, ನಮಗೂ ರೈತರು ಸಂಪರ್ಕಿಸಿ, ಕಡಿಮೆ ಮೊತ್ತ ಜಮೆ ಆಗಿರುವ ಬಗ್ಗೆ ತಿಳಿಸಿದ್ದಾರೆ. ಇಂದಿನಿಂದ ಬೆಳೆ ವಿಮೆ ಮೊತ್ತ ಜಮೆ ಆರಂಭಗೊಂಡಿದೆ. ಇನ್ನು 3-4 ದಿನಗಳಲ್ಲಿ ತಾಲೂಕಿನಲ್ಲಿ ಎಷ್ಟುಮೊತ್ತ ಜಮೆ ಆಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಬಳಿಕವೇ ಮೊತ್ತ ಕಡಿಮೆ ಆಗಿದೆಯಾ ಇಲ್ಲವಾ ಎಂದು ಹೇಳಬಹುದು' ಎನ್ನುತ್ತಾರೆ ಅಧಿಕಾರಿಗಳು ತಿಳಿಸಿದ್ದಾರೆ.