Gram one franchise-ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಾಗಿ ಅರ್ಜಿ ಆಹ್ವಾನ: ನಿಮ್ಮ ಹಳ್ಳಿಯಲ್ಲೇ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣಾವಕಾಶ
<Krushirushi> <ಗ್ರಾಮ ಒನ್> <ಗ್ರಾಮ ಒನ್ ಫ್ರಾಂಚೈಸಿ> <ಗ್ರಾಮ ಒನ್ ಅರ್ಜಿ> <ಗ್ರಾಮಒನ್> <Gram one> <Gram one application> <Gram one franchise> <Gram one online application> <How to apply for gram one franchise>
Gram one franchise-ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಾಗಿ ಅರ್ಜಿ ಆಹ್ವಾನ: ನಿಮ್ಮ ಹಳ್ಳಿಯಲ್ಲೇ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣಾವಕಾಶ
ಕರ್ನಾಟಕ ಸರ್ಕಾರವು ಗ್ರಾಮ ಒನ್ ಕೇಂದ್ರಗಳ ಫ್ರಾಂಚೈಸಿಯನ್ನು ಆರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದರಿಂದ ಗ್ರಾಮೀಣ ಜನರಿಗೆ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ. ಕಲಬುರಗಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಬಹುದು. ಅರ್ಜಿ ಸಲ್ಲಿಸಲು ಜನವರಿ 15, 2026 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳು ಹಾಗೂ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಗ್ರಾಮ ಒನ್ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನೀವು ಕೂಡ ಗ್ರಾಮ ಒನ್ ಫ್ರಾಂಚೈಸಿಯನ್ನು ಆರಂಭಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ನಿರ್ದೇಶನಾಲಯವು ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಗ್ರಾಮ ಒನ್ ಎಂದರೇನು?
ಗ್ರಾಮ ಒನ್ ಎಂಬುದು ಗ್ರಾಮೀಣ ಮಟ್ಟದಲ್ಲಿ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು 2020-21ರ ಆಯವ್ಯಯದಲ್ಲಿ ಘೋಷಿಸಿದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಗ್ರಾಮ ಮಟ್ಟದಲ್ಲಿ ನಾಗರಿಕ ಕೇಂದ್ರಿತ ಚಟುವಟಿಕೆಗಳಿಗೆ ಏಕ ಸಹಾಯಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸರ್ಕಾರದಿಂದ ನಾಗರಿಕರಿಗೆ ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಮತ್ತು ಆರ್‌ಟಿಐ ಅರ್ಜಿಗಳೂ ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ಸೇವೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೇಂದ್ರಗಳು ವಾರದ ಏಳು ದಿನಗಳೂ ಸಹ ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಸತತವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಗ್ರಾಮೀಣ ಜನರು ಕಚೇರಿಗಳಿಗೆ ಅಲೆಯುವ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.
ಗ್ರಾಮ ಒನ್ ಕೇಂದ್ರದಿಂದ ಆಗುವ ಲಾಭಗಳು:
- ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ: ಸಾರ್ವಜನಿಕರು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗಾಗಿ ಅಥವಾ ದಾಖಲೆಗಳಿಗಾಗಿ ಪದೇ ಪದೇ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ಎಲ್ಲಾ ಸೇವೆಗಳು ಗ್ರಾಮ ಮಟ್ಟದಲ್ಲೇ ದೊರೆಯುತ್ತವೆ.
- ಸಮಯ ಮತ್ತು ಹಣದ ಉಳಿತಾಯ: ನಾಗರಿಕರು ತಮ್ಮ ಹಳ್ಳಿಯಲ್ಲೇ ಸೇವೆಗಳನ್ನು ಪಡೆಯುವುದರಿಂದ ನಗರ ಪ್ರದೇಶಗಳಿಗೆ ಪ್ರಯಾಣಿಸುವ ಖರ್ಚು ಕಡಿಮೆಯಾಗುತ್ತದೆ ಮತ್ತು ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯುವ ಸಮಯ ಉಳಿತಾಯವಾಗುತ್ತದೆ.
- ಮಧ್ಯವರ್ತಿಗಳ ಹಾವಳಿ ಇಲ್ಲ: ಗ್ರಾಮ ಒನ್ ಕೇಂದ್ರಗಳಲ್ಲಿ ನೇರ ಮತ್ತು ಪಾರದರ್ಶಕ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ, ಇದರಿಂದ ಹಣ ದುರುಪಯೋಗವಾಗುವುದು ತಪ್ಪುತ್ತದೆ.
- ಅನುಕೂಲಕರ ಸಮಯ: ಈ ಕೇಂದ್ರಗಳು ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ಕಾರ್ಯನಿರ್ವಹಿಸುವುದರಿಂದ, ಕೃಷಿ ಕಾರ್ಮಿಕರು ಅಥವಾ ಉದ್ಯೋಗಸ್ಥರು ತಮ್ಮ ಕೆಲಸ ಮುಗಿದ ನಂತರ ತಮಗೆ ಅನುಕೂಲವಾದ ಸಮಯದಲ್ಲಿ ಭೇಟಿ ನೀಡಿ ಸೇವೆಗಳನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?
ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿ ಇರುವ ಅಭ್ಯರ್ಥಿಗಳು 01 ಜನವರಿ 2026 ರಿಂದಲೇ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಫ್ರಾಂಚೈಸಿ ಪಡೆಯಲು ಅರ್ಜಿ ಸಲ್ಲಿಸಲು 15 ಜನವರಿ 2026ರ ಸಂಜೆ 6:00 ಗಂಟೆಯವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಈ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದ್ದು, ಯಾವುದೇ ರೀತಿಯ ಭೌತಿಕ ಅಥವಾ ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ದಿನಾಂಕ ಮತ್ತು ಸಮಯದ ನಂತರ ಬರುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಆಹ್ವಾನಿಸಲಾದ ಜಿಲ್ಲೆಗಳು
ಪ್ರಸ್ತುತ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಕೇವಲ ಕಲಬುರಗಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳು ಸೇರಿದ್ದರೆ, ಕಲಬುರಗಿ ವಿಭಾಗದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳು ಮಾತ್ರ ಈ ಹಂತದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ ಏನು?
ಅರ್ಜಿದಾರರು ಕನಿಷ್ಠ ಪಿಯುಸಿ (PUC II), ಡಿಪ್ಲೊಮಾ, ಐಟಿಐ ಅಥವಾ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಕಂಪ್ಯೂಟರ್ ನಿರ್ವಹಣೆಯ ಬಗ್ಗೆ ಕಡ್ಡಾಯವಾಗಿ ಜ್ಞಾನ ಹೊಂದಿರಬೇಕಾದುದು ಅವಶ್ಯಕ
ಬಂಡವಾಳ ಹೂಡಿಕೆ ಎಷ್ಟು?
ಈ ಕೇಂದ್ರವನ್ನು ಆರಂಭಿಸಲು ಅಭ್ಯರ್ಥಿಯು ಸುಮಾರು 1 ರಿಂದ 2 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಒದಗಿಸಬೇಕು. ಅರ್ಜಿಯ ಜೊತೆಗೆ 100 ರೂಪಾಯಿಗಳ ಮರುಪಾವತಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಈ ಯೋಜನೆಗೆ ಆಯ್ಕೆಯಾದರೆ, 5000 ರೂಪಾಯಿಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಪಾವತಿಸಬೇಕು.
ಗ್ರಾಮ ಒನ್_ ಕೇಂದ್ರಗಳ ಸೇವೆಗಳ ವಿವರ
ಮೂಲ ಸೌಕರ್ಯದ ಅವಶ್ಯಕತೆಗಳೇನು
- ಗ್ರಾಮ ಒನ್ ಕೇಂದ್ರವು ಕನಿಷ್ಠ 100 ಚದರ ಅಡಿ ವಿಸ್ತೀರ್ಣವಿರುವ ಒಂದು ಪ್ರತ್ಯೇಕ ಕೊಠಡಿಯನ್ನು ಹೊಂದಿರಬೇಕು.
- ಈ ಕೇಂದ್ರವು ಗ್ರಾಮದ ಪ್ರಮುಖ ಸ್ಥಳದಲ್ಲಿದ್ದು, ಸಾರ್ವಜನಿಕರು ಸುಲಭವಾಗಿ ಭೇಟಿ ನೀಡುವಂತಿರಬೇಕು.
- ಕೊಠಡಿಯ ನೆಲಹಾಸು ಟೈಲ್ಸ್ ಅಥವಾ ಗ್ರಾನೈಟ್‌ನಿಂದ ಕೂಡಿರಬೇಕು ಹಾಗೂ ಉತ್ತಮ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು.
- ಕೇಂದ್ರಕ್ಕೆ ಬರುವ ಗ್ರಾಹಕರಿಗಾಗಿ ಕನಿಷ್ಠ 4 ಕುರ್ಚಿಗಳ ಆಸನ ವ್ಯವಸ್ಥೆ ಇರಬೇಕು.
- ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಮಾಹಿತಿ ಪ್ರದರ್ಶನಕ್ಕಾಗಿ ಎಲ್.ಸಿ.ಡಿ ಟಿವಿ ಅಳವಡಿಸಿರುವುದು ಕಡ್ಡಾಯ.
ತಾಂತ್ರಿಕ ಸಾಮಗ್ರಿಗಳ ಅವಶ್ಯಕತೆಗಳು
- ಕೇಂದ್ರದಲ್ಲಿ ಕನಿಷ್ಠ i3 ಸಂರಚನೆಯ ಡೆಸ್ಕ್‍ಟಾಪ್ ಅಥವಾ ಲ್ಯಾಪ್‍ಟಾಪ್ ಇರಬೇಕು.
- ಸ್ಕ್ಯಾನ್ ಮತ್ತು ಪ್ರಿಂಟ್ ಮಾಡಲು ಅನುಕೂಲವಾಗುವ ಮಲ್ಟಿ ಫಂಕ್ಷನ್ ಪ್ರಿಂಟರ್ ಹಾಗೂ ಬಯೋಮೆಟ್ರಿಕ್ ಸ್ಕ್ಯಾನರ್ ಉಪಕರಣಗಳು ಇರಬೇಕು.
- ಆನ್‌ಲೈನ್ ಸೇವೆಗಳಿಗಾಗಿ ವೆಬ್ ಕ್ಯಾಮರಾ ಮತ್ತು ವೈ-ಫೈ ರಿಸೀವರ್ ವ್ಯವಸ್ಥೆ ಹೊಂದಿರಬೇಕು.
- ಇಂಟರ್ನೆಟ್ ವ್ಯತ್ಯಯವಾಗದಂತೆ ತಡೆಯಲು ಕನಿಷ್ಠ ಇಬ್ಬರು ಸೇವೆ ಒದಗಿಸುವವರಿಂದ (ISPs) ಸ್ಥಿರವಾದ ಅಂತರ್ಜಾಲ ಸಂಪರ್ಕ ಪಡೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಗ್ರಾಮ ಒನ್ ಅಧಿಕೃತ ಪೋರ್ಟಲ್ kal-mys.gramaone.karnataka.gov.in/ ಗೆ ಭೇಟಿ ನೀಡಿ.
- ವೆಬ್‌ಸೈಟ್‌ನಲ್ಲಿ 'New Registration' ಅಥವಾ 'Apply for Franchise' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಪ್ರಾಥಮಿಕ ನೋಂದಣಿ ಮಾಡಿಕೊಳ್ಳಿ.
- ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ (ಪಿಯುಸಿ/ಪದವಿ), ಮತ್ತು ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವ ಗ್ರಾಮ ಹಾಗೂ ಜಿಲ್ಲೆಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳನ್ನು (ಗುರುತಿನ ಚೀಟಿ, ಶೈಕ್ಷಣಿಕ ದಾಖಲೆಗಳು, ಸ್ಥಳದ ಫೋಟೋಗಳು ಮತ್ತು ಪೊಲೀಸ್ ತಪಾಸಣಾ ಪ್ರಮಾಣ ಪತ್ರ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ರೂ. 100 ಅರ್ಜಿ ಶುಲ್ಕವನ್ನು ಆನ್‌ಲೈನ್ ಪೇಮೆಂಟ್ ಗೇಟ್‌ವೇ (UPI, Net Banking ಅಥವಾ Card) ಮೂಲಕ ಪಾವತಿಸಿ. ಯಾವುದೇ ಕಾರಣಕ್ಕೂ ನಗದು ಪಾವತಿ ಮಾಡಬೇಡಿ.
- ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ 'Submit' ಬಟನ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಂತರ ಬರುವ 'ಅರ್ಜಿ ಉಲ್ಲೇಖ ಸಂಖ್ಯೆ' ಅನ್ನು ಮುಂದಿನ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.
-
ಪ್ರಮುಖ ಸೂಚನೆ
ಸಾರ್ವಜನಿಕರಿಗೆ ಪ್ರಮುಖ ಸೂಚನೆಯೆಂದರೆ, ಗ್ರಾಮ ಒನ್ ಕೇಂದ್ರದ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ನಗದು ಹಣದ ಪಾವತಿಯನ್ನು ಮಾಡಬಾರದು. ಬಿಎಲ್‌ಎಸ್ ಗ್ರೂಪ್ ತನ್ನ ಯಾವುದೇ ಉದ್ಯೋಗಿ ಅಥವಾ ಪ್ರತಿನಿಧಿಗಳಿಗೆ ನಗದು ಸ್ವೀಕರಿಸಲು ಅಧಿಕಾರ ನೀಡಿರುವುದಿಲ್ಲ ಮತ್ತು ಎಲ್ಲಾ ಅಧಿಕೃತ ಪಾವತಿಗಳನ್ನು ಕೇವಲ ಆನ್‌ಲೈನ್ ಪೇಮೆಂಟ್ ಗೇಟ್‌ವೇ (ನೆಟ್ ಬ್ಯಾಂಕಿಂಗ್/ಯುಪಿಐ/ಕಾರ್ಡ್‌ಗಳು) ಮೂಲಕವೇ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಯಾರಿಗಾದರೂ ನಗದು ನೀಡಿದ್ದಲ್ಲಿ ಕಂಪನಿಯು ಅದರ ಜವಾಬ್ದಾರಿಯನ್ನು ಹೊರುವುದಿಲ್ಲ. ಯಾರಾದರೂ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ತಕ್ಷಣವೇ ಸಾಕ್ಷ್ಯದೊಂದಿಗೆ[email protected] ಇಮೇಲ್ ವಿಳಾಸಕ್ಕೆ ಅಥವಾ+91-9148712473 /+91-080 22221934 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಬೆಂಗಳೂರಿನ ಇನ್‌ಫಾಂಟ್ರಿ ರಸ್ತೆಯಲ್ಲಿರುವ ಅವರ ಕಚೇರಿಯನ್ನು ಸಂಪರ್ಕಿಸಬಹುದು.
ಸಂಪರ್ಕ ಮಾಹಿತಿ
- ದೂರವಾಣಿ ಸಂಖ್ಯೆ:
91487 12473 - ಇ-ಮೇಲ್:
[email protected]
- ದೂರವಾಣಿ ಸಂಖ್ಯೆ:

