Male nakshatragalu-2024 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ

<Krushirushi> < ಮಳೆ ನಕ್ಷತ್ರಗಳು 2024> <Male nakshatragalu>

Male nakshatragalu-2024 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ

Male nakshatragalu-2024 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ

ಚಂಡಮಾರುತವೋ....ವಾಯುಭಾರ ಕುಸಿತವೋ ಒಟ್ಟಿನಲ್ಲಿ ಮಳೆ ಬಂದರೆ ಸಾಕು ಎನ್ನುವಂತೆ ಆಗಿದೆ ಕರ್ನಾಟಕದ ಸದ್ಯದ ಪರಿಸ್ಥಿತಿ. ಮಾರ್ಚ್ ತಿಂಗಳ 2ನೇ ವಾರದಲ್ಲಿ ಸುಡು ಬಿಸಿಲಿನಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕರ್ನಾಟಕ ಬರದ ಛಾಯೆಗೆ ಸಿಕ್ಕಿ ತತ್ತರಿಸಿ ಹೋಗಿದೆ. ಇನ್ನೂ ಮಾರ್ಚ್ ಪೂರ್ತಿ, ಏಪ್ರಿಲ್ ಮತ್ತು ಮೇ ತಿಂಗಳು ಕಳೆಯುವುದು ಹೇಗೆ? ಎಂಬುದು ಜನರ ಚಿಂತೆಯಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಹಾಗೂ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನ್ವಯ ರಾಜ್ಯದಲ್ಲಿ ಬರ ಘೋಷಣೆ ಮಾಡಲಾಗಿದೆ.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲ್ಲೂಗಳೆಂದು ಸರ್ಕಾರವು ಘೋಷಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬಂದಿದೆ. ಈಗ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ.

ಸಾಮಾನ್ಯ ಮುಂಗಾರು ನಿರೀಕ್ಷೆ: 2024ನೇ ಸಾಲಿನ ಮುಂಗಾರು ಆರಂಭವಾಗುವ ಮೇ ಅಂತ್ಯ ಅಥವ ಜೂನ್ ಹೊತ್ತಿಗೆ ಎಲ್ ನಿನೋ ದುರ್ಬಲಗೊಳ್ಳಲಿದೆ. ಆದ್ದರಿಂದ ಈ ಬಾರಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಅಂದಾಜಿಸಿದೆ.

ಪಂಚಾಂಗದಲ್ಲಿನ ಮಳೆ ನಕ್ಷತ್ರಗಳ ಪ್ರಕಾರ 2024ರಲ್ಲಿ ಮಳೆ ಹೇಗಿದೆ? ಎಂಬ ಮಾಹಿತಿ ಇಲ್ಲಿದೆ. ಅಶ್ವಿನಿ ಇಂದ ಹಿಡಿದು ವಿಶಾಖ ತನಕ ಮಳೆ ನಕ್ಷತ್ರಗಳಿವೆ. ಇವುಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳ ಮಳೆ ನಕ್ಷತ್ರಗಳು ರಾಜ್ಯದಲ್ಲಿ ಮಳೆ ಸುರಿಸುವುದಿಲ್ಲ. ಮೇ, ಜೂನ್, ಜುಲೈ ಮತ್ತು ಆಗಸ್ಟ್, ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ ನಕ್ಷತ್ರಗಳ ಅನ್ವಯ ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಮಳೆ ನಕ್ಷತ್ರಗಳ ಆಧಾರದ ಮೇಲೆಯೇ ಹಲವಾರು ಗಾದೆ ಮಾತುಗಳು ಸಹ ಹುಟ್ಟಿಕೊಂಡಿವೆ.

ಅಶ್ವಿನಿ ನಕ್ಷತ್ರ 13/4/2024 ರಿಂದ ಆನೆಯನ್ನು ವಾಹನವಾಗಿ ಮಾಡಿಕೊಂಡು ಬರಲಿದ್ದು, ಸಾಧಾರಣೆ ಮಳೆ ಎಂದು ಪಂಚಾಂಗ ಹೇಳುತ್ತದೆ. ಭರಣಿ ನಕ್ಷತ್ರ 27/4/2024 ಕತ್ತೆ ವಾಹನವಾಗಿದ್ದು, ಸಾಧಾರಣೆ ಮಳೆ ನಿರೀಕ್ಷಿಸಲಾಗಿದೆ. 11/5/2024 ರಿಂದ ಕೃತಿಕ ನಕ್ಷತ್ರ ಕಪ್ಪೆಯನ್ನು ವಾಹನ ಮಾಡಿಕೊಂಡು ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಇದೆ. ಅಂದರೆ ಮೇ ತಿಂಗಳಿನಲ್ಲಿ ಮಳೆಯ ಮುನ್ಸೂಚನೆ ಇದೆ.

24/5/2024 ರಿಂದ ರೋಹಿಣಿ ಮಳೆ ನವಿಲು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 7/6/2024 ರಿಂದ ಮೃಗಶಿರ ಮಳೆ ಕುದುರೆ ಮೇಲೆ ಬರಲಿದ್ದು, ಸಾಧಾರಣ ಮಳೆಯಾಗಲಿದೆ. ಸರ್ಕಾರದ ಲೆಕ್ಕದ ಪ್ರಕಾರ ಜೂನ್ 1ರಿಂದ ಸೆಪ್ಟೆಂಬರ್ 30 ನೈಋತ್ಯ ಮುಂಗಾರು ಮಳೆಯ ಅವಧಿಯಾಗಿದೆ.

21/6/2024 ರಿಂದ ಆರಿದ್ರ ಮಳೆ ಟಗರು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ಇದೆ. ಪುನರ್ವಸು ಮಳೆ 5/7/2024 ರಿಂದ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 19/7/2024 ರಿಂದ ಪುಷ್ಯ ಮಳೆ ಕಪ್ಪೆ ವಾಹನವಾಗಿ ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ.

ಆಶ್ಲೇಷ ಮಳೆ 2/8/2024 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ ನಿರೀಕ್ಷೆ. 16/8/2024 ರಿಂದ ಮಘ ಮಳೆ ಕುದುರೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಪಂಚಾಂಗ ಅಂದಾಜಿಸಿದೆ. ಹುಬ್ಬ ಮಳೆ 30/8/2024ರಿಂದ ಇಲಿ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.

13/9/2024 ರಿಂದ ಉತ್ತರ ಮಳೆ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. ಹಸ್ತ ಮಳೆ 26/9/2024 ರಿಂದ ಟಗರು ವಾಹನವಾಗಿ ಬರಲಿದ್ದು, ಉತ್ತಮ ಮಳೆಯ ನಿರೀಕ್ಷೆ ಇದೆ. ಚಿತ್ತ 10/10/2024 ರಿಂದ ಎಮ್ಮೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ. ಸ್ವಾತಿ ಮಳೆ 23/10/2023 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ. ವಿಶಾಖ 6/11/2024 ರಿಂದ ಸುರಿಯಲಿದ್ದು, ಟಗರು ವಾಹವಾಗಿದೆ. ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರ ತನಕ ಸುರಿಯುವ ನೈಋತ್ಯ ಮುಂಗಾರು ಮಳೆಗೆ ಭಾರೀ ಮಹತ್ವವಿದೆ. ಮುಂದಿನ ವರ್ಷದ ಬರ, ಬೆಳೆ ಎಲ್ಲವನ್ನೂ ಈ ಮಳೆಯ ನಿರ್ಧಾರ ಮಾಡಲಿದೆ. ಈ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ಸಹ ಸಹಾಯಕವಾಗುತ್ತದೆ. ಡ್ಯಾಂಗಳು ಭರ್ತಿಯಾಗಿ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ.

ನೈಋತ್ಯ ಮುಂಗಾರು ಹೊರತುಪಡಿಸಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಚಂಡಮಾರುತ, ವಾಯುಭಾರ ಕುಸಿತ ಉಂಟಾಗಿ ಮಳೆಯಾಗುವ ಸಾಧ್ಯತೆಯೂ ಇದೆ. 2024ರಲ್ಲಿ ಉತ್ತಮ ಮಳೆಯಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.