ನರೇಗಾ ಸ್ವರೂಪ ಬದಲಾವಣೆ ಮಸೂದೆ: ವಿಕಸಿತ ಭಾರತದತ್ತ ‘ಜಿ ರಾಮ್‌ ಜಿ’ ಯೋಜನೆ

ನರೇಗಾ ಸ್ವರೂಪ ಬದಲಾವಣೆ ಮಸೂದೆ: ವಿಕಸಿತ ಭಾರತದತ್ತ ‘ಜಿ ರಾಮ್‌ ಜಿ’ ಯೋಜನೆ

ನರೇಗಾ ಸ್ವರೂಪ ಬದಲಾವಣೆ ಮಸೂದೆ: ವಿಕಸಿತ ಭಾರತದತ್ತ ‘ಜಿ ರಾಮ್‌ ಜಿ’ ಯೋಜನೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಜಾರಿಗೆ ತಂದಿದ್ದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯ (ನರೇಗಾ) ಹೆಸರನ್ನೂ ಸೇರಿದಂತೆ ಕಾಯ್ದೆಯಲ್ಲಿನ ಹಲವು ಪ್ರಮುಖ ಅಂಶಗಳಿಗೆ ಬದಲಾವಣೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.

ಹೆಸರನ್ನು ಮಾತ್ರವಲ್ಲ ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ನರೇಗಾ ಬದಲಿಗೆ 'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ-ಜಿ ರಾಮ್‌ ಜಿ) ಮಸೂದೆ, 2025'ಅನ್ನು ಮಂಡಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಮಸೂದೆ ಹೇಳುವುದೇನು?

 

ಅನುದಾನ: ರಾಜ್ಯಗಳಿಗೆ ಶೇ 40ರಷ್ಟು ಹೊರೆ

ನರೇಗಾ ಯೋಜನೆಗೆ ಬೇಕಾದ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರಗಳೂ ಹಣ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಶೇ 60ರಷ್ಟು ಹಣವನ್ನು, ರಾಜ್ಯ ಸರ್ಕಾರವು ಶೇ 40ರಷ್ಟು ಹಣವನ್ನು ಭರಿಸಬೇಕಾಗುತ್ತದೆ (ಎಲ್ಲ ರಾಜ್ಯ ಸರ್ಕಾರಗಳು ಮತ್ತು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು). ಈಶಾನ್ಯ ರಾಜ್ಯಗಳು, ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುದಾನ ಹಂಚಿಕೆ ಅನುಪಾತವು ಶೇ 90:10ರಷ್ಟಿರುತ್ತದೆ. ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವೇ ಪೂರ್ತಿ ಹಣ ಭರಿಸುತ್ತದೆ.

ನಿರುದ್ಯೋಗ ಭತ್ಯೆ:

ಹೊಸ ಕಾಯ್ದೆಯ ಅನ್ವಯ, ಉದ್ಯೋಗ ಖಾತರಿ ಪಡೆಯದ ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಭತ್ಯೆಯನ್ನು ರಾಜ್ಯ ಸರ್ಕಾರವೇ ನೀಡಬೇಕು ಎನ್ನುತ್ತದೆ ಮಸೂದೆ.

ಗರಿಷ್ಠ ಮಿತಿ ನಿಗದಿ

ಕೇಂದ್ರ ಸರ್ಕಾರವು ಮೊದಲೇ ನಿಗದಿಪಡಿಸಿದ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಗಳಿಗೆ ಹಣ ಮಂಜೂರು ಮಾಡುತ್ತದೆ. ಹಂಚಿಕೆ ಮಾಡಿದ ಅನುದಾನಕ್ಕಿಂತ ಹೆಚ್ಚುವರಿ ಕೆಲಸ ದಿನಗಳನ್ನು ಮಾಡಿಸಿದರೆ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ.

ಸಮಿತಿಗಳ ರಚನೆ:

ರಾಜ್ಯ ಸರ್ಕಾರಗಳಿಗೆ ಹಣ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರವು 'ರಾಷ್ಟ್ರೀಯ ಮಟ್ಟದ ಸಂಚಾಲನಾ ಸಮಿತಿ'ಯನ್ನು ರಚಿಸಬೇಕು. ಜೊತೆಗೆ, ಈ ಕಾಯ್ದೆಯ ಎಲ್ಲ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳಬೇಕು. ಅಂತೆಯೇ, ಕಾಯ್ದೆಯ ಕುರಿತು ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರಗಳೂ 'ರಾಜ್ಯ ಮಟ್ಟದ ಸಂಚಾಲನಾ ಸಮಿತಿ'ಯನ್ನು ರಚಿಸಿಕೊಳ್ಳಬೇಕು ಎನ್ನುತ್ತದೆ ಮಸೂದೆ.

ಕೇಂದ್ರ, ರಾಜ್ಯಗಳಲ್ಲಿ ಮಂಡಳಿ ರಚನೆ

ಕಾಯ್ದೆ ಜಾರಿ ಸಂಬಂಧ ನಿಗಾ ಇರಿಸಲು ಕೇಂದ್ರ ಮಟ್ಟದಲ್ಲಿ 'ಕೇಂದ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ' ಮತ್ತು ರಾಜ್ಯ ಮಟ್ಟದಲ್ಲಿ 'ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ'ಯನ್ನು ರಚಿಸಲಾಗುತ್ತದೆ.

ನಾಲ್ಕು ವಿಭಾಗಗಳಲ್ಲಿ ಕೆಲಸ

ಉದ್ಯೋಗ ಖಾತರಿ ಮೂಲಕ ಯಾವೆಲ್ಲ ಕೆಲಸಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

1. ಜಲ ಸಂಬಂಧಿತ ಕಾರ್ಯಗಳು

2. ಗ್ರಾಮೀಣ ಭಾಗದ ಮೂಲಸೌಕರ್ಯ ನಿರ್ಮಾಣ

3. ಜೀವನೋಪಾಯಕ್ಕೆ ಸಂಬಂಧಿತ ಮೂಲಸೌಕರ್ಯ ನಿರ್ಮಾಣ (ತರಬೇತಿ ಕೇಂದ್ರಗಳು, ಸಂತೆ ಮಾರುಕಟ್ಟೆ ನಿರ್ಮಾಣ, ಆಹಾರ ಸಂಗ್ರಹಿಸಲು ಸಲುವಾಗಿ ಕಟ್ಟಡ ನಿರ್ಮಾಣ, ಹೈನುಕಾರಿಕೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ)

4. ವಿಪತ್ತು ತಡೆ ಸಂಬಂಧಿತ ನಿರ್ಮಾಣ ಕಾರ್ಯಗಳು (ನಿರಾಶ್ರಿತ ಶಿಬಿರಗಳ ನಿರ್ಮಾಣ, ಕೆರೆ-ಕಟ್ಟೆಗಳು ಉಕ್ಕಿ ಹರಿಯದಂಥ ನಿರ್ಮಾಣ ಕಾರ್ಯ, ನೈಸರ್ಗಿಕ ವಿಪತ್ತಿನಿಂದ ಹಾಳಾದ ರಸ್ತೆಗಳ ದುರಸ್ತಿ, ಬಿರುಗಾಳಿಯಿಂದ ನಾಶವಾದ ತೋಟ ಮತ್ತು ಮನೆ ಮರು ನಿರ್ಮಾಣ, ಕಾಳ್ಗಿಚ್ಚು ನಿಯಂತ್ರಣ ಕಾರ್ಯಗಳು)

ಬಯೊಮೆಟ್ರಿಕ್‌ ಕಡ್ಡಾಯ

*ಕಾರ್ಮಿಕರು, ಅಧಿಕಾರಿಗಳಿಗೆ ಬಯೊಮೆಟ್ರಿಕ್‌ ದೃಢೀಕರಣ ಕಡ್ಡಾಯ

*ಕೆಲಸದ ಮೇಲೆ ನಿಗಾ ಇರಿಸಲು, ಕೆಲಸದ ಸ್ಥಳದ ಡಿಜಿಟಲ್‌ ಮ್ಯಾಪಿಂಗ್‌, ಉಪಗ್ರಹ ಚಿತ್ರಗಳು ಸೇರಿದಂತೆ ಇತರೆ ಜಿಯೊಸ್ಪೇಷಿಯಲ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು

*ಕೆಲಸಕ್ಕಾಗಿ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಯಾವ ಕೆಲಸವಾಗಬೇಕು, ಎಷ್ಟು ಜನ ಕೆಲಸಕ್ಕೆ ಬಂದಿದ್ದಾರೆ ಎಂಬುದನ್ನು ದಾಖಲಿಸಬೇಕು, ದಿನಗೂಲಿ ನೀಡಿಕೆ, ಕೆಲಸದ ಪ್ರಗತಿ ಮೇಲೆ ನಿಗಾ ಇಡುವುದಕ್ಕೆ ಡ್ಯಾಶ್‌ಬೋರ್ಡ್‌ ಮೂಲಕ ಮೇಲ್ವಿಚಾರಣೆ ನಡೆಸಬೇಕು

*ಕೆಲಸದ ಪ್ರಗತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಡಿಜಿಟಲ್‌ ವೇದಿಕೆ ಮೂಲಕವೂ ಮಾಹಿತಿ ನೀಡಬೇಕು. ತಪಾಸಣೆ ಕೈಗೊಂಡ ಬಗ್ಗೆ, ಹಣ ಪಾವತಿಯಾದ ಬಗ್ಗೆ, ಸಂಬಂಧಪಟ್ಟ ಅಧಿಕಾರಿಗಳ ಹೆಸರು ಸೇರಿ ಎಲ್ಲ ಮಾಹಿತಿಯನ್ನು ನೀಡಬೇಕು.

'ರಾಮನ ಹೆಸರಲ್ಲಿ ದಂಡನೆ'

ಕೇರಳದ ಸಂಸದ ಜಾನ್‌ ಬ್ರಿಟ್ಟಾಸ್ ಅವರು ಹೊಸ ಮಸೂದೆ ಕುರಿತು ಎಕ್ಸ್‌ ಪೋಸ್ಟ್‌ ಮಾಡಿ ನರೇಗಾದ ಈಗಿನ ಸ್ವರೂಪ ಹಾಗೂ ಹೊಸ ಕಾಯ್ದೆ ಜಾರಿಗೆ ಬಂದರೆ ಆಗುವ ಬದಲಾವಣೆಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ ಇಲ್ಲಿದೆ:

ನರೇಗಾ ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿ ಅವರ ಹೆಸರು ತೆಗೆದುಹಾಕಿರುವುದು ಟ್ರೇಲರ್‌ ಮಾತ್ರ. ಈ ಮಸೂದೆಯಿಂದಾಗುವ ಹಾನಿಯು ತೀವ್ರವಾಗಿದೆ. ಹಕ್ಕು ಕೇಂದ್ರಿತವಾಗಿದ್ದ ಕಾನೂನನ್ನು ಷರತ್ತುಬದ್ಧ, ಕೇಂದ್ರ ಸರ್ಕಾರದ ಹಿಡಿತದ ಕಾನೂನಾಗಿ ಬದಲಾಯಿಸಲಾಗಿದೆ. ಈ ಕಾಯ್ದೆಯು ರಾಜ್ಯ ಸರ್ಕಾರ ಮತ್ತು ಕಾರ್ಮಿಕರ ಹಿತಾಸಕ್ತಿ ವಿರುದ್ಧ ಇದೆ. ಈ ಮಸೂದೆಯು ನರೇಗಾ ಯೋಜನೆಯ ಹೆಸರನ್ನು ಮಾತ್ರವೇ ಬದಲಾಯಿಸುತ್ತಿಲ್ಲ. ಬದಲಿಗೆ ಯೋಜನೆಯನ್ನು ಆರ್ಥಿಕವಾಗಿ, ಸಾಂಸ್ಥಿಕವಾಗಿ ಮತ್ತು ನೈತಿಕವಾಗಿ ಕೆಡವಲಾಗುತ್ತಿದೆ.

ಸತ್ಯ ಸಂಗತಿ ಏನೆಂದರೆ, ರಾಮನ ಹೆಸರಿನಲ್ಲಿ ರಾಜ್ಯಗಳು ಮತ್ತು ಬಡವರನ್ನು ದಂಡಿಸಲಾಗುತ್ತಿದೆ, ಮೋಸಗೊಳಿಸಲಾಗುತ್ತಿದೆ ಮತ್ತು ಆರ್ಥಿಕವಾಗಿ ತ್ಯಾಗ ಮಾಡಲು ಹೇರಲಾಗುತ್ತಿದೆ.

* 125 ಕೆಲಸದ ದಿನಗಳು ಎನ್ನುವುದು ತಲೆಬರಹ ಮಾತ್ರ. 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತದೆ ಎನ್ನುವುದನ್ನು ಸಣ್ಣದಾಗಿ ಒಳಗೆ ಸೇರಿಸಲಾಗಿದೆ: ನರೇಗಾಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತದೆ. ಆದರೆ, ಹೊಸ ಮಸೂದೆಯ ಪ್ರಕಾರ, ರಾಜ್ಯ ಸರ್ಕಾರವು ಶೇ 40ರಷ್ಟು ಅನುದಾನ ನೀಡಬೇಕು. ಅಂದರೆ, ರಾಜ್ಯ ಸರ್ಕಾರಗಳು ₹50 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ. ಅನುದಾನ ನೀಡುವ ಜವಾಬ್ದಾರಿಯನ್ನು ರಹಸ್ಯ ವಿಧಾನದಲ್ಲಿ ರಾಜ್ಯ ಸರ್ಕಾರಗಳ ತಲೆಮೇಲೆ ಹಾಕುವುದನ್ನು ಸುಧಾರಣೆ ಎನ್ನುವುದಿಲ್ಲ

* ನರೇಗಾವು ಬೇಡಿಕೆ ಕೇಂದ್ರಿತವಾಗಿತ್ತು: ಒಂದು ವೇಳೆ ಕಾರ್ಮಿಕನು ಕೆಲಸ ಬೇಕು ಎಂದು ಕೇಳಿದರೆ, ಕೇಂದ್ರ ಸರ್ಕಾರವು ಅದಕ್ಕೆ ಹಣ ನೀಡಬೇಕಿತ್ತು. ಆದರೆ, ಹೊಸ ಮಸೂದೆಯಲ್ಲಿ ಈ ಅವಕಾಶವನ್ನು ಕಿತ್ತುಕೊಂಡು, ಪೂರ್ವ ನಿಗದಿತ ನಿಯಮಾನುಸಾರ ಹಂಚಿಕೆ ಮತ್ತು ಗರಿಷ್ಠ ಮಿತಿಯನ್ನು ಹೇರಲಾಗಿದೆ. ಒಮ್ಮೆ ಕೇಂದ್ರ ಸರ್ಕಾರ ನೀಡಿದ ಅನುದಾನ ಮುಗಿದರೆ, ಜನರ ಹಕ್ಕು ಮೊಟಕುಗೊಳ್ಳುತ್ತದೆ

* ಪಂಚಾಯಿತಿಗಳನ್ನು ಬದಿಗೊತ್ತಿ, ಡ್ಯಾಶ್‌ಬೋರ್ಡ್‌ಗಳಿಗೆ ಅಧಿಕಾರ ನೀಡಿಕೆ: ಸ್ಥಳೀಯವಾದ ಅಗತ್ಯಕ್ಕೆ ತಕ್ಕಂತೆ ಗ್ರಾಮ ಸಭೆ ಮತ್ತು ಪಂಚಾಯಿತಿಗಳು ಕೆಲಸದ ಯೋಜನೆ ರೂಪಿಸುತ್ತಿದ್ದವು. ಆದರೆ, ಈಗ ಜಿಐಎಸ್‌ ತಂತ್ರಾಂಶ, ಪಿಎಂ ಗತಿ ಶಕ್ತಿ ದತ್ತಾಂಶಗಳ ಮೇಲೆ ಯೋಜನೆಗಳು ರೂಪುಗೊಳ್ಳುತ್ತವೆ. ಬಯೊಮೆಟ್ರಿಕ್‌, ಜಿಯೊ ಟ್ಯಾಗಿಂಗ್‌, ಡ್ಯಾಶ್‌ಬೋರ್ಡ್‌, ಕೃತಕ ಬುದ್ಧಿಮತ್ತೆ ಸಹಾಯದಿಂದ ಮಾಡುವ ಲೆಕ್ಕಪರಿಶೋಧನೆಯನ್ನು ಕಡ್ಡಾಯ ಮಾಡಲಾಗಿದೆ. ತಂತ್ರಜ್ಞಾನ ಕೈಕೊಟ್ಟರೆ ಗ್ರಾಮೀಣ ಭಾಗದ ಕೋಟಿಗಟ್ಟಲೆ ಜನರು ಕೆಲಸದಿಂದ ವಂಚಿತರಾಗುತ್ತಾರೆ

* ಇನ್ನೂ ಕೆಟ್ಟ ಅಂಶವೇನೆಂದರೆ, ನೆಟ್ಟಿ-ಕಟಾವು ಎಂಬ ಕೃಷಿ ಋತುವಿನ ಹೆಸರಿನಲ್ಲಿ 60 ಕೆಲಸ ದಿನಗಳನ್ನು ಕಡಿತ ಮಾಡಲಾಗಿದೆ. ಇದು ಕಾರ್ಮಿಕ ಗ್ಯಾರಂಟಿಯೊ ಕಾರ್ಮಿಕ ನಿಯಂತ್ರಣವೊ? ನೀವು ಕೆಲಸ ಮಾಡಬೇಡಿ, ಹಣ ಗಳಿಸಬೇಡಿ ಎಂದು ಕಾನೂನುಬದ್ಧವಾಗಿ ಕೇಂದ್ರ ಸರ್ಕಾರ ಹೇಳಿದಂತಾಗಿದೆ.

ಕೇಂದ್ರ ಹೇಳುವುದೇನು?

ಕೌಶಲರಹಿತ ಕೂಲಿ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಬರುವ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಪ್ರತಿ ವಯಸ್ಕ ವ್ಯಕ್ತಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೆಲಸಕ್ಕೆ ಶಾಸನಬದ್ಧ ಖಾತರಿ ನೀಡುವುದು ಈ ಕಾಯ್ದೆಯ ಉದ್ದೇಶ. 2047ರ ಹೊತ್ತಿಗೆ ವಿಕಸಿತ ಭಾರತದ ಮುನ್ನೋಟಕ್ಕೆ ಅನುಗುಣವಾಗಿ ಗ್ರಾಮೀಣ ಚೌಕಟ್ಟನ್ನು ರೂಪಿಸಲು ಈ ಕಾಯ್ದೆ ಸಿದ್ಧಪಡಿಸಲಾಗಿದೆ. ಸಮೃದ್ಧ ಮತ್ತು ಚೈತನ್ಯಯುತ ಗ್ರಾಮೀಣ ಭಾರತಕ್ಕಾಗಿ ಸಶಕ್ತೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನೂ ಇದು ಹೊಂದಿದೆ.

ಸಪ್ತಗಿರಿ ಉಲಾಕಾ, ಸಂಸದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಧಾನಿ ಮೋದಿ ಅವರು ನರೇಗಾವನ್ನು 'ಗುಂಡಿ ತೋಡುವ ಯೋಜನೆ' ಎಂದು ಜರಿದಿದ್ದರು. ಕೆಲಸದ ದಿನಗಳನ್ನು ಈಗ ಹೊಸ ಕಾಯ್ದೆ ತಂದಿದ್ದಾರೆಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷನರೇಗಾ ಹೆಸರು ಬದಲಾವಣೆಯಲ್ಲ, ಇದು ಯೋಜನೆಯನ್ನೇ ಅಂತ್ಯಗೊಳಿಸುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹುನ್ನಾರ. ಕೇಂದ್ರವು ಬಡವರ ಹಕ್ಕುಗಳನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳುತ್ತಿದೆಡೆರೆಕ್ ಒಬ್ರಯಾನ್‌, ಟಿಎಂಸಿ ಸಂಸದ ಮಹಾತ್ಮ ಗಾಂಧಿ ಅವರನ್ನು ಕೊಂದವನಿಗೆ ಹೀರೊ ಪಟ್ಟ ಕಟ್ಟಿ ಪೂಜಿಸಿದಂಥವರು ಇವರು. ಈಗ ಮಹಾತ್ಮನನ್ನು ಇತಿಹಾಸದಿಂದಲೇ ತೆಗೆದುಹಾಕಲು ಮುಂದಾಗಿದ್ದಾರೆಎಂ.ಎ.ಬೇಬಿ, ಸಿಪಿಎಂ ಪ್ರಧಾನ ಕಾರ್ಯದರ್ಶಿಈ ಯೋಜನೆಯಲ್ಲಿ ಕೇಂದ್ರದ ಪಾಲನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಅನುದಾನ ಕಡಿಮೆ ಮಾಡಲೂ ಇದರಲ್ಲಿ ಅವಕಾಶವಿದೆ