ಸಚಿವ ಪ್ರಿಯಾಂಕ್ ಖರ್ಗೆ ಭರವಸೆ: ಬಾಕಿ ವಿಮೆ ಹಣ 10 ದಿನಗಳಲ್ಲಿ ರೈತರ ಖಾತೆಗೆ ಜಮೆ
ಸಚಿವ ಪ್ರಿಯಾಂಕ್ ಖರ್ಗೆ ಭರವಸೆ: ಬಾಕಿ ವಿಮೆ ಹಣ 10 ದಿನಗಳಲ್ಲಿ ರೈತರ ಖಾತೆಗೆ ಜಮೆ

2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಾಕಿ ಪರಿಹಾರ ₹291.92 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, 10 ದಿನಗಳಲ್ಲಿ ಜಿಲ್ಲೆಯ ರೈತರ ಖಾತೆಗೆ ಜಮೆಯಾಗಲಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
'2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು ₹656.62 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿತ್ತು. ಇಷ್ಟು ದೊಡ್ಡ ಮೊತ್ತ ಬಿಡುಗಡೆಯಾಗಿದ್ದು ಐತಿಹಾಸದಲ್ಲೇ ಮೊದಲ ಸಲ. ಅದರಲ್ಲಿ ಮೊದಲ ಕಂತಿನಲ್ಲಿ ₹364.70 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಾಕಿ ಉಳಿದಿದ್ದ ₹291.92 ಕೋಟಿ ಪರಿಹಾರ ಮಂಜೂರಾತಿಗೆ ತಾಂತ್ರಿಕ ತೊಡಕು ಎದುರಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆ ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಡಳಿತ ಸಮರ್ಪಕ ಉತ್ತರ ನೀಡಿದೆ. ನಾವೂ ಈ ಬಗೆಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದೆವು. ಇದೀಗ ಬಾಕಿ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದ್ದು, ಮುಂದಿನ ವಾರ ಬೆಳೆವಿಮೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ' ಎಂದರು.
'ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿಯಲ್ಲಿ 1.05 ಲಕ್ಷ ಹೆಕ್ಟೇರ್ ಹಾನಿ ಅಂದಾಜಿಸಲಾಗಿದೆ. ಈ ಸಲವೂ 3 ಲಕ್ಷದಷ್ಟು ರೈತರು ಬೆಳೆವಿಮೆ ಪಡೆದಿದ್ದಾರೆ. ಜಿಲ್ಲಾಡಳಿತ ಹೋಬಳಿಮಟ್ಟದಲ್ಲಿ ಮುಂದಿನ 10 ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ನಿಖರ ಹಾನಿಯನ್ನು ಲೆಕ್ಕಹಾಕಲಿದೆ. ಬಳಿಕ ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಿ ಪರಿಹಾರ ಕೊಡಿಸಲು ಯತ್ನಿಸಲಾಗುವುದು' ಎಂದರು.