Union budget 2025-ಕೇಂದ್ರ ಬಜೇಟ್ 2025ರಲ್ಲಿ ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ರೈತರಿಗೆ ಸಿಗಲಿವೆ ಈ ಕೊಡುಗೆಗಳು
<Krushirushi> <Union budget 2025> <Union budget> <Budget> <ಬಜೇಟ್> <ಕೇಂದ್ರ ಬಜೇಟ್> <ಕೇಂದ್ರ ಬಜೇಟ್-2025>

Union budget 2025-ಕೇಂದ್ರ ಬಜೇಟ್ 2025ರಲ್ಲಿ ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ರೈತರಿಗೆ ಸಿಗಲಿವೆ ಈ ಕೊಡುಗೆಗಳು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 3.0 ಸರ್ಕಾರ ರೈತರಿಗೆ ಯಾವ ಕೊಡುಗೆ ನೀಡಲಿದೆ ಎಂದು ಚರ್ಚೆಗಳು ನಡೆಯುತ್ತಿವೆ. ಹೊಸ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುತ್ತಿದೆ. ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಸಿಗುವ ಭರವಸೆಗಳೇನು?, ರೈತರ ಕಲ್ಯಾಣಕ್ಕಾಗಿ ಸರ್ಕಾರ ಯಾವ ಯಾವ ಘೋಷಣೆಗಳನ್ನು ಮಾಡಲಿದೆ?ಎಂದು ಕಾದು ನೋಡಬೇಕಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2025-26 ಮಂಡಿಸಲಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ, ಬಜೆಟ್‌ನಲ್ಲಿಯೂ ಹೊಸ ಘೋಷಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಪ್ರಮುಖವಾಗಿ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮಿತಿಯನ್ನು ಹೆಚ್ಚಿಸಲಿದ್ದಾರೆ. ಜಿಎಸ್‌ಟಿ ಕಡಿಮೆ ಮಾಡಲಿದ್ದಾರೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನವನ್ನು ನೀಡುವ ನಿರೀಕ್ಷೆ ಇದೆ.
PM Kisan Samman: ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ 12,000ಕ್ಕೆ ಏರಿಕೆ
ರೈತರ ಕಲ್ಯಾಣಕ್ಕೆ ಆದ್ಯತೆ: ರೈತರ ಆದಾಯವನ್ನು ಹೆಚ್ಚಿಸಬೇಕು, ಅವರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿದೆ. ಆದ್ದರಿಂದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ರಿಂದ 5 ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಇದರಿಂದಾಗಿ ರೈತರು ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಅನುಕೂಲವಾಗಲಿದೆ.
ರೈತರಿಗೆ ಅನುಕೂಲ ಮಾಡಿಕೊಡಲು ಬಜೆಟ್‌ನಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆ ಮಾಡುವ ನಿರೀಕ್ಷೆ ಇದೆ. ಜಿಎಸ್‌ಟಿ ಕಡಿಮೆ ಮಾಡಿದರೆ ದರಗಳು ಕಡಿಮೆಯಾಗಲಿದ್ದು, ರೈತರ ಹಣವೂ ಉಳಿತಾಯವಾಗಲಿದೆ.
ಹಿಂದಿನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ, ಕೃಷಿ ಸಂಬಂಧಿತ ಯೋಜನೆಗಳಿಗೆ ಸರ್ಕಾರ 65,529 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಈ ಬಾರಿ ಬಜೆಟ್‌ನಲ್ಲಿ ಇದನ್ನು ಶೇ 5 ರಿಂದ 7ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದ್ದು, ಇದರಿಂದಾಗಿ ಹೆಚ್ಚಿನ ಅನುದಾನ ಲಭ್ಯವಾಗಲಿದೆ.
ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಪ್ರಮುಖ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ. ಈ ಯೋಜನೆಯಡಿ ರೈತರಿಗೆ ನೀಡುವ ಹಣಕಾಸಿನ ಬೆಂಬಲವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಯೋಜನೆಯಡಿ ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಸದ್ಯ ಯೋಜನೆಯಡಿ ರೂ. 6000 ಅನ್ನು ವಾರ್ಷಿಕವಾಗಿ ಮೂರು ಸಮಾನ ಕಂತುಗಳಲ್ಲಿ ರೂ. 2000 ದಂತೆ ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದನ್ನು 12,000 ರೂ.ಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
2024ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಕೃಷಿ ಮೂಲಸೌಕರ್ಯ ನಿಧಿ' ಅಡಿಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು. ದೇಶದಲ್ಲಿ ಕೃಷಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಮತ್ತು ರೈತ ಸಮುದಾಯವನ್ನು ಬೆಂಬಲಿಸಲು ಕೃಷಿ ಮೂಲಸೌಕರ್ಯ ನಿಧಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರವು ಹಲವು ಕ್ರಮಗಳನ್ನು ಘೋಷಿಸಿತ್ತು.