ಕರ್ನಾಟಕ ರೈತರಿಗೆ ಕೇಂದ್ರದ ದಸರಾ ಕೊಡುಗೆ: 5 ಧಾನ್ಯಗಳಿಗೆ ಕೇಂದ್ರದ ಬೆಂಬಲ ಬೆಲೆ ಖರೀದಿಗೆ ಅನುಮತಿ
ಕರ್ನಾಟಕ ರೈತರಿಗೆ ಕೇಂದ್ರದ ದಸರಾ ಕೊಡುಗೆ: 5 ಧಾನ್ಯಗಳಿಗೆ ಕೇಂದ್ರದ ಬೆಂಬಲ ಬೆಲೆ ಖರೀದಿಗೆ ಅನುಮತಿ

MSP Purchase approval to Five grains : ಹೆಸರು, ಉದ್ದು, ಶೇಂಗಾ, ಸೋಯಾಬಿನ್, ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆ. ಈ ಸಂಬಂಧ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಅತಿವೃಷ್ಟಿಯಿಂದ ತತ್ತರಿಸಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಹೊಸದಿಲ್ಲಿ / ಬೆಂಗಳೂರು : ಅತಿವೃಷ್ಟಿಯಿಂದಾಗಿ ತತ್ತರಿಸಿದ್ದ ಕರ್ನಾಟಕದ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಇದೀಗ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ ಮೇರೆಗೆ ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಿದೆ.
2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರು ಆಹಾರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಖುದ್ದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ತಕ್ಷಣವೇ ಕರ್ನಾಟಕದ ರೈತರ ನೆರವಿಗೆ ಮುಂದಾಗುವಂತೆ ತಿಳಿಸಿದ್ದರು. ಅಂತೆಯೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಮನವಿಗೆ ತ್ವರಿತ ಸ್ಪಂದನೆ ನೀಡಿ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ಈ ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಸಹ ನೀಡಿದ್ದಾರೆ.
ಯಾವುದೆಷ್ಟು ಖರೀದಿಗೆ ಕೇಂದ್ರ ಅಸ್ತು?: ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಕರ್ನಾಟಕದಿಂದ 38000 ಮೆಟ್ರಿಕ್ ಟನ್ ಹೆಸರು ಕಾಳು, 60,810 MT ಉದ್ದು, 15,650 MT ಸೂರ್ಯಕಾಂತಿ, 61,148 MT ಕಡಲೆಬೀಜ ಮತ್ತು 1,15,000 MT ಸೋಯಾಬಿನ್ ಖರೀದಿಗೆ ಅನುಮತಿ ನೀಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಜಿಲ್ಲಾವಾರು ಖರೀದಿ ಕೇಂದ್ರಕ್ಕೆ ಜೋಶಿ ಒತ್ತಾಯ: ಕೇಂದ್ರ ಸರ್ಕಾರ, ಕರ್ನಾಟಕದ ರೈತರಿಗೆ ಕಲ್ಪಿಸಿರುವ ಈ ಬೆಂಬಲ ಬೆಲೆ ಯೋಜನೆ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು. ಈ ಕೂಡಲೇ ರಾಜ್ಯಾದ್ಯಂತ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಜೋಶಿ ಧನ್ಯವಾದ: ಕರ್ನಾಟಕದ ರೈತರ ಸಂಕಷ್ಟ ಅರಿತು ಈ ಮೂಲಕ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಸಚಿವ ಪ್ರಲ್ಹಾದ ಜೋಶಿ ರಾಜ್ಯದ ರೈತರ ಪರವಾಗಿ ಧನ್ಯವಾದ ಸಹ ಅರ್ಪಿಸಿದ್ದಾರೆ.