Mansoon-2026 ಕೇರಳಂಗೆ ಮುಂಗಾರು ಪ್ರವೇಶ: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಂತೆ!
Mansoon-2026 ಕೇರಳಂಗೆ ಮುಂಗಾರು ಪ್ರವೇಶ: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಂತೆ!
4 ದಿನ ತಡವಾಗಿಯಾದರೂ ಕೇರಳಂಗೆ ಮುಂಗಾರು ಪ್ರವೇಶಿಸಿದೆ. ಎಲ್ ನಿನೋ ಪರಿಣಾಮ ಈ ಬಾರಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆ.
ಭಾರತದ ಕೃಷಿಯ ಜೀವಸೆಲೆಯಾದ ಮುಂಗಾರು ಮಾರುತಗಳು ಕಡೆಗೂ ಇಂದು ಕೇರಳಂ ಪ್ರವೇಶಿಸಿವೆ. ಸಾಮಾನ್ಯವಾಗಿ ಜೂನ್ 1ರಂದು ನೈಋತ್ಯ ಮುಂಗಾರು ಮಾರುತಗಳು ಕೇರಳಂ ಮೂಲಕ ಭಾರತ ಪ್ರವೇಶಿಸುತ್ತಿದ್ದವು. ಆದರೆ, ಈ ಋತುವಿನಲ್ಲಿ 4 ದಿನ ತಡವಾಗಿ ಬಂದಿವೆ.
ಮುಂಗಾರು ಮಾರುತಗಳು ಕೇರಳಂ ಪ್ರವೇಶಿಸಿದ್ದನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೃಢಪಡಿಸಿದೆ. "ನೈಋತ್ಯ ಮುಂಗಾರು ಮಾರುತಗಳು ಇಂದು, ಅಂದರೆ 2026ರ ಜೂನ್ 4ರಂದು ಕೇರಳದ ಮೂಲಕ ಭಾರತ ಪ್ರವೇಶಿಸಿವೆ. ಇವುಗಳು ನೈಋತ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಉಳಿದ ಭಾಗಗಳು, ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷ ದ್ವೀಪಗಳು, ಕೇರಳ ಮತ್ತು ಪುದುಚೇರಿ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳು, ಕೊಮೊರಿನ್ ಪ್ರದೇಶದ (ಕನ್ಯಾಕುಮಾರಿ) ಉಳಿದ ಭಾಗಗಳು, ಆಗ್ನೇಯ ಬಂಗಾಳ ಕೊಲ್ಲಿ ಹಾಗೂ ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳತ್ತ ಮುನ್ನಡೆದಿವೆ" ಎಂದು ಐಎಂಡಿ ತಿಳಿಸಿದೆ.
ವಾಡಿಕೆಗಿಂತ ಕಡಿಮೆ ಮಳೆ:ಮುಂಗಾರು ದೇಶ ಪ್ರವೇಶಿಸಿದೆ ಎಂಬ ಖುಷಿಯ ಜೊತೆಗೆ ಬೇಸರದ ಸಂಗತಿ ಎಂದರೆ, ಈ ವರ್ಷದ ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಮುನ್ಸೂಚನೆ. ಹವಾಮಾನ ಇಲಾಖೆ, ಈ ವರ್ಷದ ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿದೆ. ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅಂದಾಜಿಸಿದೆ. ಈ ವರ್ಷ ಭಾರತದಲ್ಲಿ ದೀರ್ಘಾವಧಿ ಸರಾಸರಿಯ ಶೇ.90ರಷ್ಟು ಮಳೆಯಾಗಬಹುದು ಎಂದು ಐಎಂಡಿ ನಿರೀಕ್ಷಿಸಿದೆ.
ಏನಿದು ದೀರ್ಘಾವಧಿ ಸರಾಸರಿ ಮಳೆ?:ದೀರ್ಘಾವಧಿ ಸರಾಸರಿ (ಎಲ್‌ಪಿಎ) ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸುರಿದ ಮಳೆಯನ್ನು ಒಂದು ತಿಂಗಳು ಅಥವಾ ಹಂಗಾಮಿನ ಆಧಾರದ ಮೇಲೆ (ಸಾಮಾನ್ಯವಾಗಿ 30ರಿಂದ 50 ವರ್ಷಗಳು) ಲೆಕ್ಕ ಹಾಕಲಾಗುವ ಸರಾಸರಿ ಪ್ರಮಾಣ. 1971 ರಿಂದ 2020 ರವರೆಗಿನ ದತ್ತಾಂಶದ ಆಧಾರದ ಮೇಲೆ ದೇಶದ ಒಟ್ಟಾರೆ ಮುಂಗಾರು ಹಂಗಾಮಿನ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ 87 ಸೆಂಟಿಮೀಟರ್ ಆಗಿದೆ. ಒಂದು ವೇಳೆ ಮುಂಗಾರು ಹಂಗಾಮಿನಲ್ಲಿ ಎಲ್‌ಪಿಎಯ ಶೇಕಡಾ 90ಕ್ಕಿಂತ ಕಡಿಮೆ ಮಳೆಯಾದರೆ, ಅದನ್ನು ಹವಾಮಾನ ಇಲಾಖೆಯು 'ಕೊರತೆ' ಮಳೆ ಎಂದು ಪರಿಗಣಿಸುತ್ತದೆ.
ಕಡಿಮೆ ಮಳೆಗೆ ಎಲ್ ನಿನೋ ಕಾರಣ:ಈ ಬಾರಿ ಭಾರತದಲ್ಲಿ ಕಡಿಮೆ ಮಳೆಯಾಗಲು ಎಲ್ ನಿನೋ (ಬಿಸಿ ಗಾಳಿ) ಕಾರಣ ಎಂದು ತಜ್ಞರು ಹೇಳಿದ್ದಾರೆ. ಭೂಮಧ್ಯರೇಖೆಯ ಪೆಸಿಫಿಕ್ ವಲಯದಲ್ಲಿ ತಟಸ್ಥವಾಗಿದ್ದ ಎಲ್ ನಿನೋ ಈಗ ಬದಲಾಗಿದೆ. ಆದಾಗ್ಯೂ, ಇದರ ಪ್ರಭಾವ ಜೂನ್ ತಿಂಗಳಲ್ಲಿ ಕ್ಷೀಣವಾಗಿರಲಿದ್ದು, ಸೆಪ್ಟೆಂಬರ್ ವೇಳೆಗೆ ಮಧ್ಯಮದಿಂದ ತೀವ್ರತೆ ಪಡೆಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಈ ಹಿಂದೆ, ಹವಾಮಾನ ಇಲಾಖೆಯು ಮೇ 26ರಂದೇ ಕೇರಳದ ಮೂಲಕ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿತ್ತು. ಮುಂಗಾರು ಆಗಮನ 4 ದಿನ ತಡವಾಗಿದೆ.
ಕೇರಳಂಗೆ ಗುರುವಾರ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮೇ 26ರಂದೇ ಕೇರಳಂನಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತಾದರೂ, ವಾಡಿಕೆಗಿಂತಲೂ ಮೂರು ದಿನ ತಡವಾಗಿ ಭಾರತದ ಮುಖ್ಯಭಾಗದಲ್ಲಿ ಮುಂಗಾರು ಪ್ರವೇಶಿಸಿದೆ.
ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದೂ ಐಎಂಡಿ ಹೇಳಿತ್ತಾದರೂ ಈ ವರ್ಷ ಭಾರತದಲ್ಲಿ ಸುರಿಯುವ ಮಳೆಯು ದೀರ್ಘಾವಧಿ ಸರಾಸರಿಯ ಶೇಕಡ 90ರಷ್ಟಿರಬಹುದು ಎಂದಿತ್ತು.
ಸಾಮಾನ್ಯವಾಗಿ ನೈರುತ್ಯ ಮುಂಗಾರು ಜೂನ್ 1ರಂದು ಕೇರಳಂ ಪ್ರವೇಶಿಸುತ್ತದೆ. ಜುಲೈ 8ರ ಒಳಗಾಗಿ ಇಡೀ ದೇಶವನ್ನು ಆವರಿಸಿಕೊಳ್ಳುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯವ್ಯ ಭಾರತದಿಂದ ಸ್ಥಳಾಂತರಗೊಂಡು, ಅಕ್ಟೋಬರ್ 15ರ ಹೊತ್ತಿಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
1975ರಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 1990ರಲ್ಲಿ ಮೇ 19ರಂದೇ ಕೇರಳಂಗೆ ಮುಂಗಾರು ಪ್ರವೇಶಿಸಿತ್ತು. ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ, 2025ರಲ್ಲಿ 13 ದಿನಗಳು ಮುಂಚಿತವಾಗಿ ರಾಜ್ಯಕ್ಕೆ ನೈರುತ್ಯ ಮುಂಗಾರು ಅಪ್ಪಳಿಸಿತ್ತು.
‘ಮಳೆಯ ಆರಂಭದ ದಿನಾಂಕಕ್ಕೂ– ದೇಶದಲ್ಲಿ ಒಟ್ಟಾರೆ ಮಳೆ ಸುರಿಯುವ ಪ್ರಮಾಣಕ್ಕೂ ನೇರವಾಗಿ ಯಾವುದೇ ಸಂಬಂಧವಿಲ್ಲ’ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ದೀರ್ಘಾವಧಿ ಸರಾಸರಿ ಎಂದರೇನು?
ದೀರ್ಘಾವಧಿ ಸರಾಸರಿ (ಎಲ್‌ಪಿಎ) ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಂದು ತಿಂಗಳು ಅಥವಾ ಒಂದು ಹಂಗಾಮಿನಂತಹ ನಿಗದಿತ ಅವಧಿಯಲ್ಲಿ ದಾಖಲಾದ ಮಳೆಯನ್ನು ದೀರ್ಘಾವಧಿಯವರೆಗೆ (ಸಾಮಾನ್ಯವಾಗಿ 30ರಿಂದ 50 ವರ್ಷಗಳು) ಸರಾಸರಿ ಮಾಡುವುದಾಗಿದೆ.
‘50 ವರ್ಷಗಳ ದೀರ್ಘಾವಧಿ ಸರಾಸರಿ (1971ರಿಂದ 2020ರವರೆಗಿನ ದತ್ತಾಂಶ) ಲೆಕ್ಕಾಚಾರದಲ್ಲಿ ದೇಶದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 87 ಸೆಂ.ಮೀನಷ್ಟು ಮಳೆಯಾಗುತ್ತದೆ. ಈ ಬಾರಿ ಈ ಪ್ರಮಾಣದ ಶೇ 90ರಷ್ಟು ಮಾತ್ರವೇ ಮಳೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಶೇ 94ರಷ್ಟು ಮಳೆಯಾದರೆ, ಅದು ವಾಡಿಕೆ ಮಳೆ. ವಾಡಿಕೆಗಿಂತ ಶೇ 4ರಷ್ಟು ಮಳೆ ಪ್ರಮಾಣದಲ್ಲಿ ಏರುಪೇರಾಗಬಹುದು. ಒಂದು ವೇಳೆ ವಾಡಿಕೆ ಮಳೆ ಪ್ರಮಾಣದ ಶೇ 90ರಷ್ಟು ಮಳೆಯಾದರೆ ಮಳೆ ಕೊರತೆ ಉಂಟಾಗಲಿದೆ’ ಎಂದು ಇಲಾಖೆ ತಿಳಿಸಿದೆ.
