Neelagiri-ನೀಲಗಿರಿ ಬೆಳೆದರೆ ಅಂತರ್ಜಲ ಕಡಿಮೆಯಾಗುತ್ತಾ?
Neelagiri-ನೀಲಗಿರಿ ಬೆಳೆದರೆ ಅಂತರ್ಜಲ ಕಡಿಮೆಯಾಗುತ್ತಾ?
ಒಂದು ಕಾಲಕ್ಕೆ ನಮ್ಮ ಭಾಗದಲ್ಲಿ ಯಥೇಚ್ಚ ಮಳೆಯಾಗುತ್ತಿತ್ತು. ಅಂತರ್ಜಲವೂ ಹೆಚ್ಚಾಗಿತ್ತು. ಕೆರೆಗಳಲ್ಲೂ ವರ್ಷಪೂರ್ತಿ ನೀರು ಇರುತ್ತಿತ್ತು. ಕೃಷಿಗೆ ನೀರಿನ ಕೊರತೆ ಅಷ್ಟಾಗಿ ಇರಲಿಲ್ಲ. ನೀರ ನೆಮ್ಮದಿ ನಮ್ಮ ಬದುಕಿನ ಭಾಗವೂ ಆಗಿತ್ತು. ಈಗ ನೋಡಿ ನಾವು ಬರಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದೇವೆ. ಮಳೆಗಳು ಏರುಪೇರಾಗಿವೆ. ಇದರಿಂದ ಕೃಷಿಯಿಂದಲೇ ವಿಮುಖವಾಗುವ ಸ್ಥಿತಿ ನಿಧಾನವಾಗಿ ನಿರ್ಮಾಣವಾಗುತ್ತಿದೆ. ಇದರ ಹಿಂದೆ ಸರ್ಕಾರದ ನೀತಿ, ನೀಲಗಿರಿ ಮರದ ಕೊಡುಗೆಯೂ ಇದೆ'.
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಗ್ರಾಮಾಂತರ ಭಾಗಗಳಲ್ಲಿ ಒಂದು ಸುತ್ತು ಹಾಕಿ ಬಂದರೆ ಇಂತಹ ಅಭಿಪ್ರಾಯ ಸಾಮಾನ್ಯವಾಗಿದೆ.
ಐದು ದಶಕದ ಹಿಂದೆ ಅವರ ಬದುಕಿಗೆ ಆಸರೆಯಾಗಿದ್ದ ನೀಲಗಿರಿ ಎಂಬ ಮರ ಈಗ ಅಡ್ಡಿಯಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ನೀಲಗಿರಿ ನಿರ್ಮೂಲನೆಗೆ ಒಂದೂವರೆ ದಶಕದ ಹಿಂದೆ ಆದೇಶ ಹೊರಡಿಸಿ ಜಾರಿಗೊಳಿಸಲು ಪ್ರಯತ್ನಿಸುತ್ತಲೇ ಇದೆ. ಅರಣ್ಯ ಇಲಾಖೆ ನೀಲಗಿರಿ ತೆಗೆದು ಸ್ಥಳೀಯ ಸಸಿಗಳನ್ನು ನೆಟ್ಟು ವೈವಿಧ್ಯಮಯ ಪರಿಸರ ರೂಪಿಸಲು ನೀತಿಯನ್ನು ಜಾರಿಗೊಳಿಸಿದೆ.
ಆದರೆ, ಇದಕ್ಕೆ ಇನ್ನೂ ಕನಿಷ್ಟ ಎರಡು ದಶಕವಾದರೂ ಬೇಕು. ಈಗಾಗಲೇ ಬಾಧಿಸುತ್ತಿರುವ ಹವಾಮಾನ ವೈಪರಿತ್ಯ ಎನ್ನುವುದು ನಮ್ಮ ಮುಂದಿನ ಪೀಳಿಗೆಗೆ ಏನೆಲ್ಲಾ ತೊಂದರೆ ಮಾಡಿಬಿಡಬಹುದು ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ನೀಲಗಿರಿ ತೋಪುಗಳನ್ನು ಒಂದೊಂದಾಗಿ ಬೇರು ಸಹಿತ ಕಿತ್ತು ಹಾಕುವ ಕೆಲಸವಂತೂ ಬಿರುಸಿನಿಂದ ಸಾಗಿದೆ.
ನೀಲಗಿರಿ ಇತಿಹಾಸ
ನೀಲಗಿರಿ ಎನ್ನುವುದನ್ನು ಯುಕಲಿಪ್ಟಸ್ ಎಂದು ಕರೆಯಲಾಗುತ್ತದೆ. ಇದರ ಮೂಲ ಆಸ್ಟ್ರೇಲಿಯಾ ಲಿಯಾ. ಮಿರ್ಟೆಸಿಯಲ್ಲಿನ ಹೂಬಿಡುವ ಮರಗಳ ಕುಟುಂಬಕ್ಕೆ ಸೇರಿದೆ. 1770ರಲ್ಲಿ ನೀಲಗಿರಿಯನ್ನು ವಿಶ್ವದ ಬೇರೆಬೇರೆ ಭಾಗಗಳಿಗೆ ಸಸ್ಯವಿಜ್ಞಾನಿ ಸರ್ ಜೊಸೆಫ್ ಬ್ಯಾಂಕ್ಸ್ ಪರಿಚಯಿಸಿದರು. ಅಲ್ಲಿಂದ ನಿಧಾನವಾಗಿ ವಿಶ್ವದ ಹಲವು ದೇಶಗಳಿಗೆ ಇದು ಪರಿಚಯವಾಯಿತು. ಸರ್ಕಾರಗಳೇ ನೀಲಗಿರಿ ಬೆಳೆಸಿ ಎನ್ನುವ ನೀತಿ ಮಾಡಿದ್ದರಿಂದ ಇದು ಜನಪ್ರಿಯವಾಯಿತು.
ನೀಲಗಿರಿಯ 700ಕ್ಕೂ ಹೆಚ್ಚು ಜಾತಿ ಮರಗಳು ಅಸ್ತಿತ್ವದಲ್ಲಿದ್ದರೂ ಎಲ್ಲಾ ದೇಶಗಳಲ್ಲಿ ಇವುಗಳ ಸಂಖ್ಯೆ ಕಡಿಮೆ. ಆದರೆ. ಹೆಚ್ಚಿನ ಜಾತಿ ನೀಲಗಿರಿಗಳು ಆಸ್ಟ್ರೇಲಿಯಾದಲ್ಲಿ ಮಾತ್ರ ಉಳಿದುಕೊಂಡಿವೆ. ಬರೀ 15 ಜಾತಿಯ ನೀಲಗಿರಿಮರಗಳು ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲೂ ಕೆಲವು ಜಾತಿಯ ನೀಲಗಿರಿ ಮರಗಳು ಇವೆ.
ಔಷಧೀಯ ಗುಣವನ್ನು ಹೊಂದಿರುವ ನೀಲಗಿರಿ ತೈಲ ರೂಪದಲ್ಲಿ ನೋವುಗಳಿಗೆ ಪ್ರಮುಖ ಮದ್ದು ಆಗಿ ಕೆಲಸ ಮಾಡುತ್ತದೆ. ಸೊಳ್ಳೆಗಳನ್ನು ದೂರ ಮಾಡಿ ಮಲೇರಿಯಾದಿಂದ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆರೋಗ್ಯ ಮಹತ್ವದ ಜತೆಗೆ ಪೇಪರ್ ಉದ್ಯಮದಲ್ಲಿ ನೀಲಗಿರಿಗೆ ಇನ್ನಿಲ್ಲದ ಬೇಡಿಕೆಯಿತ್ತು. ಪೇಪರ್ ಉತ್ಪಾದನೆಗೆ ನೀಲಗಿರಿಯ ಪಲ್ಪ್‌ಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿತ್ತು. ಈಗಲೂ ಬಳಕೆಯಲ್ಲಿದೆ.
ನೀಲಗಿರಿ ಕರ್ನಾಟಕ ನಂಟು
ಕರ್ನಾಟಕದಲ್ಲೂ ನೀಲಗಿರಿ ನಂಟಿಗೆ ಶತಮಾನದ ಇತಿಹಾಸವೇ ಇದೆ. ಆಸ್ಟ್ರೇಲಿಯಾದಲ್ಲಿ ಇದನ್ನು ಪರಿಚಯಿಸಿದ ಕೆಲವೇ ವರ್ಷಗಳಲ್ಲಿ ಭಾರತಕ್ಕೂ ಪ್ರವೇಶಿಸಿತು. ಕರ್ನಾಟಕವನ್ನು ಪ್ರವೇಶಿಸಲು ಹೆಚ್ಚು ದಿನ ಉಳಿಯಲಿಲ್ಲ.
ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ನೀಲಗಿರಿಯನ್ನು ನಂದಿ ಬೆಟ್ಟದಲ್ಲಿ ಪ್ರಯೋಗ ಮಾಡಿ ಯಶಸ್ವಿಯೂ ಆಯಿತು. ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲಿ ಪರಿಚಯಿಸಲಾಯಿತು. ಆನಂತರ ನಿಧಾನವಾಗಿ ಎಲ್ಲೆಡೆ ಹಬ್ಬುತ್ತಾ ಹೋಯಿತು. ಕರ್ನಾಟಕ ಅರಣ್ಯ ಇಲಾಖೆಯೂ 5 ದಶಕದ ಹಿಂದೆ ಅರಣ್ಯೀಕರಣ ನೀತಿಯಡಿ ನೀಲಗಿರಿಯನ್ನು ಪ್ರಮುಖ ಮರವಾಗಿ ಸೇರಿಸಿದ್ದರಿಂದ 2 ಲಕ್ಷ ಹೆಕ್ಟೇರ್‌ಗೂ ಅಧಿಕ ಭಾಗದಲ್ಲಿ ಇದು ಹರಡಿಕೊಂಡಿತು.
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಲಗಿರಿ ಮರವೇ ಪ್ರಮುಖ ಆಸರೆಯಾಗಿತ್ತು. ಇದಲ್ಲದೇ ಹರಿಹರ, ದಾಂಡೇಲಿ ಸಹಿತ ಕರ್ನಾಟಕದ ಕೆಲವು ಕಡೆ ಕಾಗದ ಕಾರ್ಖಾನೆಗೆ ಇದೇ ಪ್ರಮುಖ ಕಚ್ಚಾ ವಸ್ತುವಾಗಿ ಹಲವರಿಗೆ ಉದ್ಯೋಗ ಮೂಲವೂ ಆಗಿತ್ತು. ಇದನ್ನು ಬೆಳೆಸುವುದು ಸುಲಭ ಎನ್ನುವುದು ಒಂದು ಕಡೆಯಾದರೆ ಕಟಾವು, ಸಾಗಣೆಯಿಂದ ಹಿಡಿದು ಸ್ಥಳೀಯರ ಆದಾಯಕ್ಕೆ ದಾರಿ ಮಾಡಿಕೊಟ್ಟಿತು.
ನೀಲಗಿರಿಯಿಂದ ಜಲಕಂಟಕ
ಕರ್ನಾಟಕದಲ್ಲಿ ಹೆಚ್ಚು ನೀಲಗಿರಿ ಬೆಳೆದ ಜಿಲ್ಲೆಗಳಲ್ಲಿ ನಿಧಾನವಾಗಿ ಜಲಮೂಲದ ಕೊರತೆ ಶುರುವಾಯಿತು. ನೀಲಗಿರಿ ಮರವೊಂದಕ್ಕೆ ಪ್ರತಿದಿನ ಅಂದಾಜು 80 ರಿಂದ 90 ಲೀಟರ್‌ಗಳಷ್ಟು ನೀರು ಬೇಕು. ಬೇರೆ ಮರಗಳಿಗೆ ಈ ಪ್ರಮಾಣ ಅತೀ ಕಡಿಮೆ. ಇದರಿಂದ ಅಂತರ್ಜಲ ಮಟ್ಟದಲ್ಲಿ ಏರು ಪೇರಾಯಿತು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ವಾರ್ಷಿಕ 750 ಮಿ.ಮೀನಷ್ಟಿದ್ದ ಮಳೆ ಪ್ರಮಾಣ 500ರಿಂದ 550 ಮಿ.ಮೀಗೆ ಕುಸಿಯಿತು. ಇದು ಬರೀ ಮಾಲೂರು ತಾಲ್ಲೂಕಿನ ಕಥೆಯಲ್ಲ. ನೆರೆಯ ಬಂಗಾರಪೇಟೆ, ಶ್ರೀನಿವಾಸಪುರ, ಕೋಲಾರ, ಶಿಡ್ಲಘಟ್ಟ, ಗೌರಿಬಿದನೂರು, ಪಾವಗಡ, ಮಧುಗಿರಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲ್ಲೂಕುಗಳಲ್ಲೂ ವಿಸ್ತರಣೆಯಾಯಿತು. ಮಲೆನಾಡು, ಬಯಲು ಸೀಮೆ ಭಾಗದಲ್ಲೂ ಇದ್ದ ನೀಲಗಿರಿಯಿಂದ ಇಂತಹುದೇ ಸಮಸ್ಯೆ ಕಾಣಿಸಿಕೊಂಡಿತು. ಅಂತರ್ಜಲ ಕುಸಿತ, ಕೆರೆಗಳ ನೀರಿನ ಮಟ್ಟ ಕುಸಿತ, ಮಳೆ ಕೊರತೆ, ಬಿದ್ದ ಎಲೆಗಳು ಗೊಬ್ಬರವಾಗದೇ ಇರುವುದರ ಹಿಂದೆ ಇದ್ದ ಒಂದು ಮೂಲ ನೀಲಗಿರಿ ಮರ.
ಈ ಮರಗಳ ಅಕ್ಕಪಕ್ಕದಲ್ಲಿ ಇತರ ಸಸ್ಯಗಳು ಬೆಳೆಯುವುದು ಕಷ್ಟ. ಹುಲ್ಲು ಕೂಡ ನೀರಿನ ಕೊರತೆಯಿಂದ ಬೆಳೆಯುವುದಿಲ್ಲ. ಮರಗಳೆಂದರೆ ನೆರಳು, ಪಕ್ಷಿಗಳ ಜತೆಗೆ ಹಲವು ಜೀವಿಗಳಿಗೆ ಆಸರೆ ಎನ್ನುವುದಿದ್ದರೂ ನೀಲಗಿರಿ ಮರದಲ್ಲಿ ಪಕ್ಷಿಗಳು ಗೂಡು ಕಟ್ಟುವುದಿಲ್ಲ ಎನ್ನುವುದು. ಅಂತರ್ಜಲಕ್ಕೆ ಅನಾಹುತ ತರುವ ಕಳವಳವನ್ನು ವಿಜ್ಞಾನಿಗಳು, ಪರಿಸರ ತಜ್ಞರು ವ್ಯಕ್ತಪಡಿಸಿದರು. ರೈತರೂ ಇದಕ್ಕೆ ದನಿಗೂಡಿಸಿದರು.
ನಿಷೇಧಕ್ಕೆ ಹೊಸ ನೀತಿ
2011ರಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಎಚ್.ವಿಜಯಶಂಕರ್ ಅವರ ಕಾಲದಲ್ಲಿ ಮೊದಲ ಬಾರಿಗೆ ನೀಲಗಿರಿ ಮರಗಳನ್ನು ಮಲೆನಾಡಿನಲ್ಲಿ ನಿಷೇಧಿಸುವ ಆದೇಶ ಜಾರಿ ಮಾಡಲಾಯಿತು. ಇದರ ಪರಿಣಾಮ ಕಾಣಿಸಿದ್ದರಿಂದ ಅದನ್ನು 2017ರಲ್ಲಿ ಇತರೆ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಯಿತು.
ಈಗ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀಲಗಿರಿಯನ್ನು ಬೇರು ಸಮೇತ ಕಿತ್ತು ಹಾಕುವ ಚಟುವಟಿಕೆ ನಡೆದಿದೆ. ಮೊದಲ ಹಂತದಲ್ಲಿ ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೀಲಗಿರಿ ನಿರ್ಮೂಲನೆಯನ್ನು ಆರಂಭಿಸಿದೆ. ಈಗಾಗಲೇ ಹೆಚ್ಚು ಭಾಗದಲ್ಲಿ ನೀಲಗಿರಿ ತೆಗೆದು ಹಾಕಲಾಗಿದೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಭಾಗದಲ್ಲಿ ಸಂಪೂರ್ಣವಾಗಿ ತೆಗೆದು ಹಾಕಲಾಗುತ್ತದೆ.
‘ನೀಲಗಿರಿ ಪ್ರಮಾಣ ಹೆಚ್ಚಿದ್ದು ಹವಾಮಾನ ವೈಪರಿತ್ಯದ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ. ಅಂತರ್ಜಲ ಕುಸಿದು, ವೈವಿಧ್ಯಮಯ ಸಸ್ಯ ಸಂಪತ್ತು ನಾಶವಾಗಲು ನೀಲಗಿರಿ ಕೊಡುಗೆ ನೀಡಿದೆ. ಇದನ್ನು ಅರಿತು ಕರ್ನಾಟಕ ಅರಣ್ಯ ಇಲಾಖೆಯು ಕಾರ್ಯಯೋಜನೆ, ಸಂಶೋಧನೆ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ನೀಲಗಿರಿ ತೆಗೆದು ಹಾಕುತ್ತಿದೆ. ಇದರ ಜತೆಗೆ ವೈವಿಧ್ಯಮಯ ಸಸ್ಯ, ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿಯಮಿತವಾಗಿ ಸೂಚನೆ ನೀಡಲಾಗುತ್ತಿದೆ. ಪಶ್ಚಿಮಘಟ್ಟ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಭಾಗದಲ್ಲಿ ವಿಶೇಷ ಒತ್ತು ಕೊಟ್ಟು ತೆಗೆದು ಹಾಕಲಾಗುತ್ತಿದೆ. ಖಾಸಗಿ ನಡುತೋಪುಗಳಿಗೂ ಸೂಚನೆ ನೀಡಿ ಅಲ್ಲಿಯೂ ತೆಗೆಸಲಾಗುತ್ತದೆ. ನೀಲಗಿರಿ ಪ್ರಮಾಣವಂತೂ ಈಗ ತಗ್ಗಿದೆ. ನಿಧಾನವಾಗಿ ಹವಾಮಾನ ವೈಪರಿತ್ಯ ಅನಾಹುತ ತಪ್ಪಿಸಲು ದಾರಿಯಾಗಲಿದೆ‘ ಎಂದು ಕರ್ನಾಟಕ ಅರಣ್ಯ ಇಲಾಖೆಯ ಸಂಶೋಧನೆ, ಕಾರ್ಯಯೋಜನೆ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಹೇಳುತ್ತಾರೆ.
