ಜಮೀನು "ಪೋಡಿ" ಎಂದರೇನು? ಏಕೆ ಮಾಡಿಸಬೇಕು, ಅನುಕೂಲಗಳೇನು? ಇಲ್ಲಿದೆ ನೋಡಿ ಮಾಹಿತಿ
ಜಮೀನು "ಪೋಡಿ" ಎಂದರೇನು? ಏಕೆ ಮಾಡಿಸಬೇಕು, ಅನುಕೂಲಗಳೇನು? ಇಲ್ಲಿದೆ ನೋಡಿ ಮಾಹಿತಿ
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ದೊಡ್ಡ ಮಟ್ಟದ 'ಪೋಡಿ ಅಭಿಯಾನ' ಆರಂಭಿಸಿದೆ. ರಾಜ್ಯದಲ್ಲಿ ಲಕ್ಷಾಂತರ ರೈತರಿಗೆ ಸರ್ಕಾರದಿಂದ ಮಂಜೂರಾದ ಜಮೀನುಗಳಲ್ಲೂ ಹಲವಾರು ಪ್ರಕರಣಗಳು ಇನ್ನೂ ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿವೆ.
ಈ ಹಿಂದೆ ಸರ್ಕಾರದ ಅವಧಿಯಲ್ಲೂ ಅನೇಕ ಚರ್ಚೆಗಳು ನಡೆದಿದ್ದರೂ ಸರಿಯಾದ ಪರಿಹಾರ ದೊರೆತಿರಲಿಲ್ಲ. ಸುಮಾರು 10 ಲಕ್ಷ ರೈತರಿಗೆ ಮಂಜೂರಾದ ಸರ್ಕಾರಿ ಜಮೀನುಗಳ ಪೋಡಿ ದುರಸ್ತಿ ಆಗದೆ ಉಳಿದಿರುವುದರಿಂದ, ರೈತರಿಗೆ ಜಮೀನು ಮಾಲೀಕತ್ವದ ಸಂಪೂರ್ಣ ಹಕ್ಕು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ 2024ರ ಸೆಪ್ಟೆಂಬರ್ ತಿಂಗಳಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಪೋಡಿ ಸಮಸ್ಯೆಯ ಪ್ರಮುಖ ಕಾರಣಗಳು
ಅಧಿಕಾರಿಗಳು ದಶಕಗಳ ಹಿಂದೆ ನೂರು ಎಕರೆ ಜಮೀನಿದ್ದರೆ ಅದಕ್ಕಿಂತ ಹೆಚ್ಚು ವಿಸ್ತೀರ್ಣ ಮಂಜೂರು ಮಾಡಿದ ಪ್ರಕರಣಗಳು.
ಕೆಲವು ಸಂದರ್ಭಗಳಲ್ಲಿ ಜಮೀನು ಬಳಕೆ ಮಾಡದವರಿಗೂ ಮಂಜೂರು ಮಾಡಿರುವುದು.
ಕೆಲವು ರೈತರ ಹೆಸರು ಆರ್‌ಟಿಸಿಯಲ್ಲಿ ಇದ್ದರೂ, ನಿಖರ ದಾಖಲೆಗಳ ಕೊರತೆ.
ಕೆಲವು ರೈತರು ಅರ್ಜಿ ಸಲ್ಲಿಸಿದ್ದರೂ ಮಂಜೂರು ದಾಖಲೆಗಳಿಲ್ಲ.
ಈ ಕಾರಣಗಳಿಂದ ರೈತರು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೂ, ಆ ಭೂಮಿಯಿಂದ ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಪೋಡಿ ಎಂದರೆ ಏನು?
ಪೋಡಿ ಎಂದರೆ ಜಮೀನಿನ ದುರಸ್ತಿ ಭಾಗ ಮಾಡುವುದು ಎಂದರ್ಥ. ಒಂದು ಸರ್ವೆ ನಂಬರ್‌ನಲ್ಲಿ ಹಲವಾರು ಜನರ ಹೆಸರಿದ್ದರೆ, ಅವರ ಹೆಸರನ್ನು ಪ್ರತ್ಯೇಕವಾಗಿ ಗುರುತಿಸಿ ದಾಖಲೆ ತಯಾರು ಮಾಡುವ ಪ್ರಕ್ರಿಯೆ.
ಪೋಡಿಗೆ ನಾಲ್ಕು ವಿಧಗಳಿವೆ:
ದರ್ಖಾಸ್ತು ಪೋಡಿ
ಅಲಿನೇಷನ್ ಪೋಡಿ
ತತ್ಕಾಲ ಪೋಡಿ
ಮ್ಯೂಟೇಷನ್ ಪೋಡಿ
ಪೋಡಿ ಏಕೆ ಮಾಡಿಸಬೇಕು?
ಒಂದು ಸರ್ವೆ ನಂಬರ್‌ನಲ್ಲಿ ಹಲವು ಹಿಸ್ಸಾ ಸಂಖ್ಯೆಗಳಿದ್ದರೂ, ಭೂ ಮಾಲೀಕತ್ವ ಒಂದೇ ಪಹಣಿಯಲ್ಲಿ ಇದ್ದರೆ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ.
ಪೋಡಿ ಮಾಡಿದರೆ ಪ್ರತಿ ರೈತನಿಗೆ ಪ್ರತ್ಯೇಕ ಹಿಸ್ಸಾ ಸಂಖ್ಯೆ, ತಾತ್ಕಾಲಿಕ ಪೋಡಿ ನಂಬರ್ ಮತ್ತು ಏಕ ಮಾಲೀಕತ್ವದ ಪಹಣಿ ದೊರೆಯುತ್ತದೆ.
ಪೋಡಿಗೆ ಬೇಕಾಗಿರುವ ದಾಖಲೆಗಳು
ಜಮೀನು ಮಾಲೀಕನ ಆಧಾರ್ ಕಾರ್ಡ್
ಪಹಣಿ ಪ್ರತಿಗಳು
ಹೆಚ್ಚಿನ ಮಾಹಿತಿಗಾಗಿ ತಹಶಿಲ್ದಾರ್ ಕಚೇರಿ ಅಥವಾ ನಾಡ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಪೋಡಿಯಿಂದ ಹೆಸರು ಬದಲಾಗುವುದಿಲ್ಲ; ಕೇವಲ ಗಡಿ ಗುರುತು ಮಾಡಲಾಗುತ್ತದೆ.
ಪೋಡಿಯಿಂದಾಗುವ ಪ್ರಮುಖ ಪ್ರಯೋಜನಗಳು
ಏಕ ಮಾಲೀಕತ್ವದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಬೆಳೆ ಸಾಲ ಸಿಗುತ್ತದೆ.
ಭೂಮಿ ಮಾಲೀಕತ್ವ ಖಚಿತವಾಗುವುದರಿಂದ ವಿವಾದಗಳು ತಪ್ಪುತ್ತವೆ.
ಬೆಳೆ ವಿಮೆ ಪಡೆಯಲು ಸುಲಭ.
ಸರ್ಕಾರದ ಎಲ್ಲ ಸೌಲಭ್ಯಗಳು ಹಾಗೂ ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲ.
ಕೃಷಿ ಭೂಮಿ ಖರೀದಿ-ಮಾರಾಟಕ್ಕೆ ಪೋಡಿ ಕಡ್ಡಾಯ.
ರಾಜ್ಯ ಸರ್ಕಾರದ ಈ ಹೊಸ ಪೋಡಿ ಅಭಿಯಾನದ ಮೂಲಕ ವರ್ಷಗಳಿಂದ ಬಾಕಿ ಉಳಿದ ಪ್ರಕರಣಗಳಿಗೆ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆಯಿದೆ. ಇದರಿಂದ ರೈತರಿಗೆ ಸಂಪೂರ್ಣ ಮಾಲೀಕತ್ವ ದೊರೆಯುವ ಜೊತೆಗೆ ಕೃಷಿ ಸಂಬಂಧಿತ ಸೌಲಭ್ಯಗಳ ಲಾಭವೂ ಹೆಚ್ಚಲಿದೆ.

